Posts

Showing posts from January, 2023

ವಿಶ್ವಗುರು ಭಾರತ..🙏

Image
ವಿಶ್ವಗುರು ಭಾರತದ ಶ್ರೇಷ್ಠತೆ ಹೆಮ್ಮೆಯಿಂದಲಿ ಹಾಡುವ  ಭಾವರಾಗತಾಳದೊಂದಿಗೆ ಬನ್ನಿ ಐಕ್ಯತೆ ಸಾರುವ  ಗಾಂಧಿ ಭೊಸರ ವೀರ ಭಗತರ ದಿಟ್ಟ ಮಾರ್ಗದಿ ಸಾಗುವ  ಸತ್ಯ ಧರ್ಮಕೆ ನ್ಯಾಯ ನಿಷ್ಠೆಗೆ ನಿತ್ಯ ಶಿರಸಾ ಬಾಗುವ  ಶಿಸ್ತು ಸೌಹಾರ್ದತೆಯ ತೋರಿದ ನಮ್ಮ ಚೊಚ್ಚಲ ಸಭ್ಯತೆ ಘನ ಪರಂಪರೆ ಉಳಿಸಿ ಬೆಳೆಸಲು ಇರಲಿ ನಮ್ಮಯ ಬದ್ಧತೆ ಸಹ್ಯ ವಿಂದ್ಯ ಗಿರಿ ಹಿಮಾಲಯ ನಮ್ಮ ಕಾಯುವ ತಂದೆಯು ಗಂಗೆ ಯಮುನೆ ತುಂಗೆ ಕೃಷ್ಣೇಯರೆಮ್ಮ ತಣಿಸುವ ತಾಯಿಯು  ಸ್ವರ್ಗವೀ ನೆಲ ಭರತ ಭೂಮಿಯೆ ನಮ್ಮ ಲಾಲಿಸೊ ತೊಟ್ಟಿಲು  ರಾಮಕೃಷ್ಣ ಬುದ್ಧರುದಿಸಿದ ಜಗದ ಶಾಂತಿಯ ಬಟ್ಟಲು  ಜ್ಞಾನ ದಾನ ಮಾನ ಮೆರೆದು ವಿಶ್ವದಗ್ರವ ಮುಟ್ಟುವ ಬನ್ನಿರೆಲ್ಲರು ಸೇರಿ ಶ್ರಮಿಸುತ ಮೇರು ರಾಷ್ಟ್ರವ ಕಟ್ಟುವ  ಜಾತಿ ಮತಗಳ ಪಂಥ ಮುರಿದು ಎಲ್ಲ ಸೋದರraguva ಬಡವ ಬಲ್ಲಿದ ಭೇದ ತೊರೆದು ಎಲ್ಲರೂ ಒಂದಾಗುವ  ಮೌಡ್ಯದಜ್ಞಾನವನು ದಹಿಸಿ ಜ್ಞಾನ ಜ್ಯೋತಿಯ ಬೆಳಗುವ  ಮಾತೃ ಭೂಮಿಗೆ ದೇಹ ಸವೆಸುವ ಬದುಕನನುದಿನ ಬಾಳುವ  ತ್ಯಾಗ ಬಲಿದಾನಗಳ ತವರು ಧೀರ ಯೋಧರ ನಾಡಿದು  ಸಕಲ ಧರ್ಮವ ಸಕಲ ಶಾಸ್ತ್ರವ ಸಾಕಿ ಸಲುಹಿದ ಬೀಡಿದು  ಭಾರತಾಂಬೆಯ ಮಕ್ಕಳೇಲ್ಲರು ವಿಶ್ವಮಾನವರಾಗುವ ಯಾರ ಬೇಡದೆ ಕೈಯ ಚಾಚದೆ ಆತ್ಮನಿರ್ಭರರಾಗುನ ✍🏻..ನಾಬಾಹಿ ಡಾ. ಹಿತೇಶ್ ಪ್ರಸಾದ್ ಬಿ.  (ಜ.ನ.ವಿ_ಹಾಸನ)

ಮರಳಿ ಮಣ್ಣಿಗೆ

Image
ಮಣ್ಣೆಂದು ಜರಿಯುವರು,  ಮಣ್ಣಿಗೇ ಮರುಗುವರು ಹೆಣ್ಣು ಹೊನ್ನಿನ ತೆರದೆ ಮಣ್ಣಿಗೂ ಬೆರಗುವರು ಮಣ್ಣೆಮ್ಮ ಪೊರೆದವಳೆಂಬುದರಿಯದೆ ಕೊನೆಗೆ ಮಣ್ಣಲ್ಲಿ ಮಣ್ಣಾಗಿ ಬೆರೆತು ಹೋಗುವರು.  ಮಣ್ಣ ಸತ್ವವದೆಮ್ಮ ಶ್ರಮಕೆ ಫಲ ಒಡ್ಡುವುದು ಮಣ್ಣ ಸಹನೆಯೇ ನಮ್ಮ ಕುಚೇಷ್ಟೆಗಳ ಸಹಿಸಿಹುದು ರತಿ ಮಣ್ಣು ಮತಿ ಮಣ್ಣು ಸ್ಥಿತಿ ಮಣ್ಣು ಗತಿ ಮಣ್ಣು ಏನಿಹುದು ಮಣ್ಣಿರದ ಅಂಶ ಧರಣಿಯಲಿ  ಮಣ್ಣ ಗಂಧವೆ ಮಂದಹಾಸವು ಮಣ್ಣಲೇಪಾಭ್ಯಂಜನ ಮೃಣ್ಮಯಾಗಿಹ ಕಲೇವರಕೆ ಮಣ್ಣೆ ಅಮೃತಸಿಂಚನ ಮಣ್ಣ ಕೊಂದು ಕಟ್ಟಬೇಕೇ ಬೆರಗು ಲೋಕವ ಬಾಳಿಗೆ ಬಂದ ಆಸ್ತಿಯೊ ಗಳಿಸಿದ್ದಲ್ಲ ಉಳಿಸಿ ಮಣ್ಣನ್ನು ನಾಳೆಗೆ  ಬೆರಗು ಬಣ್ಣವ ಮರೆತು, ಮರಳಿ ಮಣ್ಣಲಿ ಬೆರೆತು ನಿರ್ಲಿಪ್ತ ನಿಶ್ಚಿಂತ ಅನಿಕೇತರಾಗಿ ಡಂಬ ಭ್ರಾಂತಿಯ ತೊರೆದು ಕ್ಷಿಪ್ರಕ್ರಾಂತಿಯ ಮೆರೆದು ನಮ್ರದಲಿ ಅನವರತ ಪ್ರಕೃತಿಗೆಬಾಗಿ  ✍🏻..ನಾಬಾಹಿ ಡಾ. ಹಿತೇಶ್ ಪ್ರಸಾದ್ ಬಿ.

ಯೋಗದಯೋಗ

Image
ಯೋಗಕು ಮೀರಿದ ಯೋಗವದೆಲ್ಲಿ । ಆತ್ಮಾರೋಗ್ಯಕ್ಕೆ ಮೂಲವದು ।। ಬರಿಯ ಆಸನವೇ ಯೋಗವಲ್ಲ । ಬದುಕಲು ದಾರಿಯದು ।। ಯಮ ನಿಯಮಗಳ ಅಷ್ಟಾಂಗಗಳೇ  ರಾಜ ಯೋಗಕೆ ಬೋಧನವು । ನಿನ್ನಲೆ ಜಗವು ಜಗವೇ ನೀನು ನಿನ್ನ ನಿನರಿವುದೇ ಸಾಧನವು ।। ಆಸೆಯೇ ಕಾರಣ ಎಲ್ಲರೋಗಕು ತೊಲಗಿಸು ಆಮಿಷಗಳ ವಿಷವ । ದೊರೆತುದರಲ್ಲೇ ತೃಪ್ತಿ ಪಡುತನೆಡೆ ಮುನ್ನೋಡುತ ಯೋಗದ ದಿಶವ ।। ಸುಖ-ದುಃಖಗಳ ದೂರವಿರಿಸುತಾ ಸಮಚಿತ್ತದಿ ಮರೆಯುತ ಭೋಗ । ಶ್ವಾನ-ಕಾಂಚನವ ಏಕರೂಪದಿ  ನೋಡುತ ಬದುಕುವುದೇ ಯೋಗ ।। ಲೋಕವೇ ಗುರುವು ಲೋಕವೇ ಸಖನು ಲೋಕಹಿತದಲಿದೆ ನಿನ್ನಗತಿ । ಲೀನನಾಗು ನಿನ್ನತ್ವಮರೆತನಿತು ಸಾಮರಸ್ಯದಿಂದಿರೆ ಪ್ರಗತಿ ।। ನಿಲ್ಲು ಮಾನವ ಏಕೆ ಓಡುವೆ ಚಿತ್ತವೃತ್ತಿಗಳ ಬಂಧಿಸಿಡು । ತಿರುಗಿಸಿ ಒಳಗೆ ಇಂದ್ರಿಯಗಳನು ಅಂತರಾತ್ಮನಿಗೆ ವಂದಿಸಿಡು ।। ✍🏻..ನಾಬಾಹಿ ಡಾ. ಹಿತೇಶ್ ಪ್ರಸಾದ್ ಬಿ. 

ಋತು ರಹಸ್ಯ

Image
ಏನು ಧರಣಿಯ  ಸೊಬಗು ಹೇಗೆ ಅರಿವುದವಳ ರಹಸ್ಯವ..!?  ಮಂಜು ಮಳೆ ಹಿಮಗಾಳಿ ಚಳಿಗಳ ವಿಸ್ಮಯ ಋತುಚಕ್ರವ ಎಂತು ಪಡೆವುದು ಪರಮ ಸ್ವಾಸ್ಥ್ಯವ ಬದಲುತಿರಲೀ ಪ್ರಕೃತಿ ಕಾಲವರಿತು ನಡೆಯೆ ಕಾರ್ಯ ಕಾಡದೆಂದಿಗು ವಿಕೃತಿ  ಇಳೆಯ ಚಲನೆಗೆ ಎರಡು ಅಯನಗಳಾರು ಋತುಗಳು ವರ್ಷಕೆ. ಚಳಿ ವಸಂತ ಬೇಸಿಗೆ ಮಳೆ ಶರತ್ ಹಿಮವೆಂಶೀರ್ಷಿಕೆ. ಮಾಘದಿಂದೆರಡೆರಡು ಮಾಸ ಸೇರಿ ಋತುಗಳ ಲಕ್ಷಣ ಮೊದಲ ಮೂರು ಉತ್ತರಾಯಣ ಮಿಕ್ಕ ಮೂರೆ ದಕ್ಷಿಣ  ಸೂರ್ಯ ತಾಪದ ಬಿಸಿಯ ಗಾಳಿಯ ಬಲವಹೀರುವ ಉತ್ತರ ತಂಪು ಗುಣಗಳ ದಕ್ಷಿಣಯನದಿ ಬಲವು ಹಿಗ್ಗುವುದೆತ್ತರ ಕಹಿಯೊಗರುಕಟು ಹುಳಿಲವಣಸಿಹಿಯಿಂದ ತುಂಬುವುದೀಜಗೆ ಋತುವನರಿತಾಹಾರ ಸೇವನೆಯಿಂದ ಹಿತವು ಮನುಜಗೆ  ದೀರ್ಘ ರಾತ್ರಿಯ ಚಳಿಯಕಾಲ ತಂಪುಗಾಳಿ ಬೀಸುತ ರೇಷ್ಮೆ ಉಣ್ಣೆ ಬಟ್ಟೆ ಧರಿಸಿ ಬಿಸಿಯ ಸಿಹಿಯ ಸವಿಯುತ ಬೆಚ್ಚಗಿನ ವ್ಯಾಯಾಮ ಮಾಡಿ ಕುಂಕುಮಾಗರು ಲೇಪಿತ ಸ್ನಾನ ಪಾನ ಶೌಚಕೆಲ್ಲಕು ಬಿಸಿಯ ನೀರೇ ಬಲು ಹಿತ ಮೃದುಕಿರಣದಿಂ ಹಸಿರ ಚಿಗುರಿಸಿ ಬಂದ ಸಂತದ ಭಾಸ್ಕರ ಕಹಿಯೊಗರುವ್ಯಾಯಾಮ ತೊರೆದರೆ ಕಫದ ರೋಗಕೆ ಆಗರ ಶುಂಠಿ ಜೇನು ಜಲವ ಕುಡಿಯುತ ಸುತ್ತ ಪ್ರಕೃತಿ ಸುಂದರ ತೆಳುವ ಬಟ್ಟೆ ಧರಿಸಿ ಸವಿಯಿರಿ ರಾತ್ರಿ ಪೌರ್ಣಿಮ ಚಂದಿರ  ರಣಬಿಸಿಲಿನ ಸುಡುವ ರವಿಯಿಂಬಂತು ಬೇಸಿಗೆಧಾವಿಸಿ ಖಾರಬಿಸಿವ್ಯಾಯಾಮ ತ್ಯಜಿಸಿ ತಂಪು ದ್ರವಗಳ ಸೇವಿಸಿ ಅಲ್ಪ ನಿದ್ರೆ ಬಿಸಿಲತಾಪದಿ ಮಲ್ಲೆ ಗಂಧವ ಲೇಪಿಸಿ ಹತ್ತಿಯುಡುಗೆಯ ಒಡವೆಯಾಗಿಸಿ...

ಸ್ವಚ್ಛ ಭಾರತ..🇮🇳

Image
 ಸ್ವಚ್ಛ ಭಾರತ..🇮🇳 ಎಲ್ಲಿಯದದು ಸ್ವಚ್ಛತೆ.. ಸುಳ್ಳನಾಡಿ ಕೊಳ್ಳೆಹೊಡೆದ ಶುಭ್ರ ಬಿಳಿಯಬಟ್ಟೆಯಲೋ.. ದುಡಿದು ಬೆವರ ಹರಿಸಿ ಹಸಿದ ಕೂಲಿಯವನ ರೊಟ್ಟಿಯಲೋ..??  ಲಂಚಕಾಗಿ ದೀನರೆದೆಯ ಭಗೆವ ಖಾಕಿ ಸೆಂಟಿನಲೋ, ತಿಪ್ಪೆಬದಿಗೆ ಹಂಚಿತಿಂದ ಭಿಕಾರಿ ಗುಣ ಸುಗಂಧದಲೋ..??  ಬಾಹ್ಯ ಶುದ್ದಿ ಮಾಯೆಯಾಟ, ಮುಖ್ಯ ಒಳಗೆ ಸ್ವಚ್ಛವು.. ಅಂತರಂಗ ಶುಭ್ರವಿರಲು ಸ್ವಚ್ಛ ರಾಷ್ಟ್ರ ಸಿದ್ಧವು..  ಮನದ ಕಸವ ತೊಡೆಯಲಾಚೆ ಸ್ವಸ್ಥವಹುದು ಭಾರತ.. ವಿದ್ಯೆಹಣತೆ ಎಲ್ಲಾ ಹಚ್ಚೆ ಸ್ವಚ್ಛವಹುದು ಭಾರತ🙏🏻  ✍🏻..ನಾಬಾಹಿ ಹಿತೇಶ್ ಪ್ರಸಾದ್ ಬಿ.  (ಜ.ನ.ವಿ_ಹಾಸನ)

ವೈದ್ಯೋ ನಾರಾಯಣೋ ಹರಿಃ

Image
 ಏನಿದು ವೈದ್ಯೋ ನಾರಾಯಣೋ ಹರಿಃ??🤔       ಇಂದು ಮುಂಜಾನೆಯಿಂದಲೂ ಎಲ್ಲರ ಬಾಯಲ್ಲೂ ಕೇಳಿದ ಒಂದೇ ಸಾಲು ವೈದ್ಯೋ ನಾರಾಯಣೋ ಹರಿಃ, ಕನ್ನಡದಲ್ಲಿ ಓದಿದಾಗ ಸಹಜವಾಗಿಯೇ ಇದರ ಅರ್ಥವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಹೆಚ್ಚು..  ನೀವೇನಂದುಕೊಂಡಿದ್ದೀರಿ?!  ವೈದ್ಯ ಸಾಕ್ಷಾತ್ ನಾರಾಯಣನಿಗೆ ಸಮ ಎಂದೇ?!!  ಇದೊಂದು ಸಂಸ್ಕೃತ ಸುಭಾಷಿತದ ಶ್ಲೋಕ..  ಈ ಶ್ಲೋಕವನ್ನು ಪೂರ್ಣವಾಗಿ ಒಮ್ಮೆ ಅವಲೋಕಿಸೋಣ..  शरीरे जर्जरीभूते व्याधिग्रस्ते कलेबरे । औषधं जाह्नवीतोयं वैद्यो नारायणो हरिः ॥  ಆಯುರ್ವೇದದ ಕೃಪೆಯಿಂದಾಗಿ ನಾನರಿತಿರುವ ಸಂಸ್ಕೃತದ ಅಲ್ಪ ಜ್ಞಾನದಿಂದ ಇದರ ಅರ್ಥವನ್ನು ಹೀಗೆನ್ನಬಹುದು..  "ತೀವ್ರ ವ್ಯಾಧಿಯಿಂದ ಹೀನಾಯ ಸ್ಥಿತಿಯಲ್ಲಿರುವ ದೇಹಕ್ಕೆ ಗಂಗಾಜಲವೇ ಔಷಧ ಮತ್ತು ಸಾಕ್ಷಾತ್ ನಾರಾಯಣನೇ ವೈದ್ಯ"  ಈ ಶ್ಲೋಕದ ಮೊದಲ ಸಾಲಿನ ಎಲ್ಲ ಪದಗಳು ಸಪ್ತಮಿ ವಿಭಕ್ತಿಯಲ್ಲಿವೆ, ಎಂದರೆ ತೀವ್ರ ರೋಗದ ಹೀನಾಯ ಸಂದರ್ಭದಲ್ಲಿ ಮಾತ್ರ ಎಂಬ ಅರ್ಥವನ್ನು ನೀಡುತ್ತವೆ. ಇನ್ನು ಎರಡನೇ ಸಾಲಿನಲ್ಲಿರುವ ವೈದ್ಯಃ ಮತ್ತು ಹರಿಃ ಎಂಬ ಪದಗಳು ಪ್ರಥಮ ವಿಭಕ್ತಿಯಲ್ಲಿ ಇರುವುದರಿಂದ ಸ್ವಲ್ಪ ಗೊಂದಲವಾಗುವುದು ಸಹಜ ಆದರೆ ಮೊದಲನೇ ಸಾಲಿನ ಅರ್ಥಕ್ಕನುಗುಣವಾಗಿ ಓದಿದಾಗ ಸಾಕ್ಷಾತ್ ನಾರಾಯಣನೇ ವೈದ್ಯನಾಗಬೇಕಾದೀತು ಎಂಬಾರ್ಥವನ್ನು ನೀಡುತ್ತದೆ.  ಎಲ್ಲ ವ್ಯಾಧಿಗಳನ್ನೂ ವೈದ್ಯರುಗಳ...

ಕರ್ಣನಂತಾಗು ಮನವೇ...

Image
ಕರ್ಣನಂತಾಗು ಮನವೇ, ಕರ್ಣನಂತಾಗು... ಹೊಸಕಿ ಹಾಕಲು ನಿನ್ನ ನೂರು ಶಕ್ತಿಗಳುದಿಸೆ, ಹಸಿವಿನ ಬಲದಲೆ ಬದುಕ ಹಸನಾಗಿಸಿದ ಕರ್ಣನಂತಾಗು ಮನವೇ ಕರ್ಣನಂತಾಗು.. ಗುರುವೆಲ್ಲು ದೊರಕದೆ ಎಲ್ಲರೂ ಕಡೆಗಣಿಸೆ, ಛಲವನ್ನೇ ಗುರುವೆನಿಸಿ ಕೆಚ್ಚೆದೆಯ ಕಿಚ್ಚಾದ ಕರ್ಣನಂತಾಗು ಮನವೇ ಕರ್ಣನಂತಾಗು... ತನ್ನಳಿವಿಗಳುಕದೆ ಕವಚಧಾರೆಯನೆರದು ಧರೆಮರೆಯದಾ ದಾನಶೂರನಾಗುಳಿದ ಕರ್ಣನಂತಾಗು ಮನವೇ ಕರ್ಣನಂತಾಗು... ಸಾಮರ್ಥ್ಯಕ್ಕೆಂದೊಂದು ವೇದಿಕೆ ಸಿಗದೆಯೂ, ಅಸಮಾನ್ಯ ಶೌರ್ಯದಿಂ ಅಮರನಾಗುಳಿದ, ಕರ್ಣನಂತಾಗು ಮನವೇ ಕರ್ಣನಂತಾಗು... ಒಡೆಯನಿಗಿತ್ತೊಂದು ಮಾತನೂ ಒಡೆಯದೆ ಒಡನಾಡಿ ಆಗುಳಿದು ಒಡನೆಯೇ ಸಾಗಿದ ಕರ್ಣನಂತಾಗು ಮನವೇ ಕರ್ಣನಂತಾಗು... ಬದಿಗಿರಿಸು ನಿನ್ನೆಲ್ಲ ಬಯಕೆಗಳ ಮನವೇ ಬದುಕು ನೊಂದವರ ನಗಿಸಿ ಬೆಳಗಲಿ ಜಗವೆ ಕರ್ಣನಂತಾಗು ಮನವೇ ಕರ್ಣನಂತಾಗು... ✍🏼 ನಾಬಾಹಿ