ಯೋಗದಯೋಗ
ಯೋಗಕು ಮೀರಿದ ಯೋಗವದೆಲ್ಲಿ ।
ಆತ್ಮಾರೋಗ್ಯಕ್ಕೆ ಮೂಲವದು ।।
ಬರಿಯ ಆಸನವೇ ಯೋಗವಲ್ಲ ।
ಬದುಕಲು ದಾರಿಯದು ।।
ಯಮ ನಿಯಮಗಳ ಅಷ್ಟಾಂಗಗಳೇ
ರಾಜ ಯೋಗಕೆ ಬೋಧನವು ।
ನಿನ್ನಲೆ ಜಗವು ಜಗವೇ ನೀನು
ನಿನ್ನ ನಿನರಿವುದೇ ಸಾಧನವು ।।
ಆಸೆಯೇ ಕಾರಣ ಎಲ್ಲರೋಗಕು
ತೊಲಗಿಸು ಆಮಿಷಗಳ ವಿಷವ ।
ದೊರೆತುದರಲ್ಲೇ ತೃಪ್ತಿ ಪಡುತನೆಡೆ
ಮುನ್ನೋಡುತ ಯೋಗದ ದಿಶವ ।।
ಸುಖ-ದುಃಖಗಳ ದೂರವಿರಿಸುತಾ
ಸಮಚಿತ್ತದಿ ಮರೆಯುತ ಭೋಗ ।
ಶ್ವಾನ-ಕಾಂಚನವ ಏಕರೂಪದಿ
ನೋಡುತ ಬದುಕುವುದೇ ಯೋಗ ।।
ಲೋಕವೇ ಗುರುವು ಲೋಕವೇ ಸಖನು
ಲೋಕಹಿತದಲಿದೆ ನಿನ್ನಗತಿ ।
ಲೀನನಾಗು ನಿನ್ನತ್ವಮರೆತನಿತು
ಸಾಮರಸ್ಯದಿಂದಿರೆ ಪ್ರಗತಿ ।।
ನಿಲ್ಲು ಮಾನವ ಏಕೆ ಓಡುವೆ
ಚಿತ್ತವೃತ್ತಿಗಳ ಬಂಧಿಸಿಡು ।
ತಿರುಗಿಸಿ ಒಳಗೆ ಇಂದ್ರಿಯಗಳನು
ಅಂತರಾತ್ಮನಿಗೆ ವಂದಿಸಿಡು ।।
✍🏻..ನಾಬಾಹಿ
ಡಾ. ಹಿತೇಶ್ ಪ್ರಸಾದ್ ಬಿ.
Comments
Post a Comment