ನವಭಾರತಕ್ಕಾಗಿ ಆಯುರ್ವೇದ
‘’ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" 15ನೇ ಶತಮಾನದ ಜ್ಞಾನಮಣಿ ಮುಕುಟ ಕನಕದಾಸರ ಸಾಲುಗಳಿವು, ಹೊಟ್ಟೆಪಾಡಿಗಾಗಿ ದುಡಿಯಲು ಬಹಳಷ್ಟು ನೌಕರಿಗಳಿವೆ ಆದರೆ ಹೊಟ್ಟೆಪಾಡಿನ ಜೊತೆಜೊತೆಗೆ ಆತ್ಮ ಸಂತೃಪ್ತಿಯನ್ನು ಗಳಿಸಬಹುದಾದ ಕೆಲವೇ ಹುದ್ದೆಗಳಲ್ಲಿ ವೈದ್ಯ ವೃತ್ತಿಯೂ ಒಂದು. ವೈದ್ಯನಾದ ಮಾತ್ರಕ್ಕೆ ಬದುಕು ಸಾರ್ಥಕವೆಂದೆನಲ್ಲ, ವೈದ್ಯನನ್ನು "ಯಮರಾಜ ಸಹೋದರ" ಎಂದೂ ಹೇಳಿರುವುದುಂಟು. ಚರಕ ಸಂಹಿತೆ ಪ್ರತಿಪಾದಿಸುವಂತೆ ಕೋಚಿತ್ ಧರ್ಮಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕೊಚಿತ್ ಅರ್ಥಕ್ಕೆ ನಂತರದ ಆದ್ಯತೆ ಬರಬೇಕು.
ವಿಶ್ವ ಸಂಸ್ಕೃತಿಗೆ ಭಾರತದ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗ ಮತ್ತು ಆಯುರ್ವೇದ ಅಗ್ರಮಾನ್ಯವಾದವುಗಳು. ಜ್ಞಾನ ಮತ್ತು ಸಂಸ್ಕೃತಿಗಳೇ ಜಗತ್ತನಾಳುವ ಶಕ್ತಿಗಳು ಇವನ್ನು ಸಾಫ್ಟ್ ಪವರ್ಸ್ ಎಂದು ಪರಿಗಣಿಸಲಾಗುತ್ತದೆ. ಭಾರತ ಮರಳಿ ವಿಶ್ವಗುರುವಾಗಲು ಈ ಸಾಫ್ಟ್ ಪವರ್ ಗಳ ಕುರಿತು ಹೆಚ್ಚು ಗಮನಹರಿಸಬೇಕಿದೆ, ಭಾರತ ಸರ್ಕಾರ, ಅಣುಶಕ್ತಿ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಜೊತೆಗೆ ಕಲೆ ಮತ್ತು ಸಂಸ್ಕೃತಿಗಳ ಉತ್ತೇಜನಕ್ಕಾಗು ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. G20 ಶೃಂಗಸಭೆಯ ನಾಯಕತ್ವದಲ್ಲಿ ಭಾರತ ಸಂಸ್ಕೃತಿಯ ಅನಾವರಣ ಜಗತ್ತಿಗಾಯಿತು, 2023ರ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ ಆಯುರ್ವೇದದ ಸುವರ್ಣಯುಗಕ್ಕೆ ಮರು ಪೀಠಿಕೆ ಬರೆದಂತಿದೆ, ವಿಶ್ವ ಆರೋಗ್ಯ ಸಂಸ್ಥೆ (WHO) ಗಾಂಧಿನಗರದಲ್ಲಿ ನಡೆಸಿದ "Global Summit for Traditional Medicine" ಸಮ್ಮೇಳನವು ಭಾರತವೇ ಪುರಾತನ ಔಷಧ ಪದ್ಧತಿಗಳ ತವರು ಎಂದು ನಿಸ್ಸಂಶಯವಾಗಿ ಸಾರಿದೆ.
ಭಾರತ ಜಗತ್ತಿನ ಔಷಧಿಗಳ ರಾಜಧಾನಿಯಾಗಿರುವಂತೆಯೇ, ಆಯುರ್ವೇದ ಔಷಧಗಳ ರಫ್ಟಿನಲ್ಲೂ ಮುಂಚೂಣಿಯಲ್ಲಿದೆ ಜಾಗತಿಕ ಮಾರುಕಟ್ಟೆಯಲ್ಲಿ ಆಯುರ್ವೇದದ ಪಾಲುದಾರಿಕೆ 15 ಬಿಲಿಯನ್ ಡಾಲರ್ಗಳಿಗೂ ಮೀರಿದೆ, ಆಯುರ್ವೇದದ GDP ಪ್ರತಿ ವರ್ಷ 17% ಬೆಳೆಯುವ ನಿರೀಕ್ಷೆಗಳಿವೆ. ವೈದ್ಯಕೀಯ ಪ್ರವಾಸದಲ್ಲಿ ಆಯುರ್ವೇದ ಮುಂಚೂಣಿಯಲ್ಲಿದೆ. ಸಾಂಕ್ರಾಮಿಕ ವಲ್ಲದ ರೋಗಗಳ ನಿರ್ಮೂಲನೆಗೆ ಆಯುಷ್ ಕ್ಷೇಮ ಕೇಂದ್ರಗಳು, ಅಭೂತಪೂರ್ವ ಸೇವೆ ನೀಡುತ್ತಿವೆ.
ಇನ್ನು ನಮ್ಮ ಸರದಿ, ಕವಿಯೊಬ್ಬರು ಹೇಳುವಂತೆ
"ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ,
ಗಂಗೆ ಇದ್ದರೆ ತುಂಗೆ ಇದ್ದರೆ ಗಿರಿಹಿಮಾಚಲವಿದ್ದರೆ,
ವೇದವಿದ್ದರೆ ಶಾಸ್ತ್ರವಿದ್ದರೆ ಘನಪರಂಪರೆ ಇದ್ದರೆ,
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ" ನಮ್ಮ ಮುಂದಿನ ಹೆಜ್ಜೆಗಳು ಸರ್ಕಾರದ ಪ್ರಯತ್ನಕ್ಕೆ ಪೂರಕವಾಗುವಂತಿರಬೇಕು, ಆಯುರ್ವೇದವನ್ನು ಜಗತ್ತಿನೆಲ್ಲಡೆ ಪಸರಿಸಲು ಪಣತೊಡಬೇಕು. ಇದಕ್ಕಾಗಿ ವಿದ್ಯಾರ್ಥಿಗಳಾದ ನಾವು ಮಾಡಬೇಕಾಗಿರುವುದು ಇಷ್ಟೇ,
* ಆಯುರ್ವೇದ ಮೂಲ ಸಮೇತೆಗಳ ಯಥಾರ್ಥ ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಿ, ಪ್ರಸ್ತುತ ಸಮಾಜ ಅರ್ಥೈಸುವ ರೀತಿಯಲ್ಲಿ ಆ ಜ್ಞಾನದ ಪ್ರಸರಣ.
* ಆಯುರ್ವೇದ ಜೀವನ ಶೈಲಿಯ ಪಾಲನೆ ಮತ್ತು ಪ್ರಸರಣೆ.
* ತಂತ್ರಜ್ಞಾನ ಮತ್ತು ತಂತ್ರಾಂಶಗಳೊಂದಿಗೆ ಆಯುರ್ವೇದದ ಸಮ್ಮಿಲನ,
* ಆಧುನಿಕ ಸಂಶೋಧನಾ ಚೌಕಟ್ಟಿನಲ್ಲಿ ಆಯುರ್ವೇದ ಸಿದ್ಧಾಂತಗಳ ಪುನಸ್ಥಾಪನೆ.
* ಸರಳ ಭಾಷೆಗಳ ಸಾಕ್ಷಾಚಿತ್ರ, ಜನಜಾಗೃತಿ ಲೇಖನ, ಅಂಕಣಗಳ ರಚನೆ.
ಆಚಾರ್ಯ ವಾಗ್ಭಟರು ಹೇಳಿರುವಂತೆ "ವಿದೇಯಃ, ಪರಮಾದರಃ" ಎಂಬ ಎರಡು ಮಂತ್ರಗಳು ಆಯುರ್ವೇದದ ಸುವರ್ಣ ಯುಗದ ಬುನಾದಿಯಾಗಬೇಕು.
ಆಯುರ್ವೇದ ಋಷಿಮುನಿಗಳಿಂದ ಅಥವಾ ಸ್ವತಃ ಬ್ರಹ್ಮನಿಂದಲೇ ಹೇಳಲ್ಪಟ್ಟಿರುವುದು ಎಂಬ ಕಾರಣಕ್ಕೆ ನಾವು ಹೆಮ್ಮೆ ಪಡದಿದ್ದರೂ, ಶತಶತಮಾನಗಳಿಂದಲೂ ಯಾವ ಪರಿಷ್ಕರಣೆಯ ಅಗತ್ಯಗಳಿಲ್ಲದೆ ಸರ್ವಕಾಲಕ್ಕೂ ತನ್ನನ್ನು ಒಗ್ಗಿಸಿಕೊಳ್ಳುತ್ತಾ ಅಚಲವಾಗಿರುವ ಆಯುರ್ವೇದದ ಕುರಿತಾಗಿ ನಾವು ಹೆಮ್ಮೆ ಪಡಲೇಬೇಕು. ಅತ್ಯಾಧುನಿಕತೆಯಿಂದ ತತ್ತರಿಸಿ ಹೋಗುತ್ತಿರುವ ಎಲ್ಲ ಸಂಪ್ರದಾಯ ಸಂಸ್ಕೃತಿಗಳ ನಡುವೆಯೂ ಆಯುರ್ವೇದ ಸ್ಥಿರವಾಗುಳಿದು ಕಾಲರಾಯನೊಂದಿಗೆ ಕಾಲು ಹಾಕುತ್ತಿರುವುದು ಅದರ ಅಂತಃಸತ್ವ ಮತ್ತು ಸ್ವಭಾವ ನಿತ್ಯತೆಗಳನ್ನು ಸಾರುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗುವ ಭಾರತದ ಕನಸನ್ನು ಅಮೃತಕಾಲದ ಯುವಶಕ್ತಿಗಳಾದ ನಾವೇ ನನಸಾಗಿಸಬೇಕು. ನಾಡು ನುಡಿ ಪ್ರೇಮದ ಅಭಿವ್ಯಕ್ತಿಗೆ ನಾವಿಂದು ರಕ್ತದ ಕೋಡಿ ಹರಿಸಬೇಕಿಲ್ಲ, ತನುಮನ ಧನಗಳನ್ನು ಭಾರತೀಯತೆಗೆ ಅರ್ಪಿಸಿದರೆ ಅದೇ ನಮ್ಮ ಅತಿ ದೊಡ್ಡ ದೇಶ ಸೇವೆ, ಭಾರತೀಯ ಔಷದ ಪದ್ಧತಿಗಳು ಮನೆ ಮಾತಾಗಿರುವ ಈ ದಿನಗಳಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ತಲುಪಿಸುವ ಹೊಣೆಗಾರಿಕೆ ನಮ್ಮದೇ ಆಗಿದೆ. ಆಧುನಿಕರಣದ ಅಲೆಯಲ್ಲಿ ಆಯುರ್ವೇದ ತನ್ನ ಅಂಗಿಯನ್ನು ಮಾತ್ರ ಬದಲಿಸಿದರು, ತನ್ನೊಳಗಿನ ಆತ್ಮವನ್ನು ಬದಲಾಗದಂತೆ ಜಾಗೃತಿ ವಹಿಸೋಣ. ನಾಳಿನ ನವೋದಯಕ್ಕೆ ರಾಯಭಾರಿಗಳಂತೆ ಸಜ್ಜಾಗೋಣ.
"ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ, ಮೂಡುವುದು ಮೂಡುವುದು ನವ ಭಾರತ ಲೀಲೆ" ಕುವೆಂಪುರವರ ಪಾಂಚಜನ್ಯ ಕವಿತೆಯ ಈ ಸಾಲುಗಳು ನವ ಭಾರತ ನಿರ್ಮಾಣಕ್ಕೆ ಮೂಲ ಮಂತ್ರವಾಗಲಿ. "ಆತ್ಮವಚ್ಚುತವೆಂದು ಜನ್ಮಗಳು ಬಹವೆಂದು, ಮೃತ್ಯುನಶ್ವರವೆಂದು ಭಾರತಿಗೆ ಜಯವೆಂದು, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.."
Comments
Post a Comment