ವೈದ್ಯೋ ನಾರಾಯಣೋ ಹರಿಃ


 ಏನಿದು ವೈದ್ಯೋ ನಾರಾಯಣೋ ಹರಿಃ??🤔

      ಇಂದು ಮುಂಜಾನೆಯಿಂದಲೂ ಎಲ್ಲರ ಬಾಯಲ್ಲೂ ಕೇಳಿದ ಒಂದೇ ಸಾಲು ವೈದ್ಯೋ ನಾರಾಯಣೋ ಹರಿಃ, ಕನ್ನಡದಲ್ಲಿ ಓದಿದಾಗ ಸಹಜವಾಗಿಯೇ ಇದರ ಅರ್ಥವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಹೆಚ್ಚು.. 


ನೀವೇನಂದುಕೊಂಡಿದ್ದೀರಿ?! 


ವೈದ್ಯ ಸಾಕ್ಷಾತ್ ನಾರಾಯಣನಿಗೆ ಸಮ ಎಂದೇ?!! 


ಇದೊಂದು ಸಂಸ್ಕೃತ ಸುಭಾಷಿತದ ಶ್ಲೋಕ.. 


ಈ ಶ್ಲೋಕವನ್ನು ಪೂರ್ಣವಾಗಿ ಒಮ್ಮೆ ಅವಲೋಕಿಸೋಣ.. 


शरीरे जर्जरीभूते व्याधिग्रस्ते कलेबरे ।

औषधं जाह्नवीतोयं वैद्यो नारायणो हरिः ॥ 


ಆಯುರ್ವೇದದ ಕೃಪೆಯಿಂದಾಗಿ ನಾನರಿತಿರುವ ಸಂಸ್ಕೃತದ ಅಲ್ಪ ಜ್ಞಾನದಿಂದ ಇದರ ಅರ್ಥವನ್ನು ಹೀಗೆನ್ನಬಹುದು.. 


"ತೀವ್ರ ವ್ಯಾಧಿಯಿಂದ ಹೀನಾಯ ಸ್ಥಿತಿಯಲ್ಲಿರುವ ದೇಹಕ್ಕೆ ಗಂಗಾಜಲವೇ ಔಷಧ ಮತ್ತು ಸಾಕ್ಷಾತ್ ನಾರಾಯಣನೇ ವೈದ್ಯ" 

ಈ ಶ್ಲೋಕದ ಮೊದಲ ಸಾಲಿನ ಎಲ್ಲ ಪದಗಳು ಸಪ್ತಮಿ ವಿಭಕ್ತಿಯಲ್ಲಿವೆ, ಎಂದರೆ ತೀವ್ರ ರೋಗದ ಹೀನಾಯ ಸಂದರ್ಭದಲ್ಲಿ ಮಾತ್ರ ಎಂಬ ಅರ್ಥವನ್ನು ನೀಡುತ್ತವೆ. ಇನ್ನು ಎರಡನೇ ಸಾಲಿನಲ್ಲಿರುವ ವೈದ್ಯಃ ಮತ್ತು ಹರಿಃ ಎಂಬ ಪದಗಳು ಪ್ರಥಮ ವಿಭಕ್ತಿಯಲ್ಲಿ ಇರುವುದರಿಂದ ಸ್ವಲ್ಪ ಗೊಂದಲವಾಗುವುದು ಸಹಜ ಆದರೆ ಮೊದಲನೇ ಸಾಲಿನ ಅರ್ಥಕ್ಕನುಗುಣವಾಗಿ ಓದಿದಾಗ ಸಾಕ್ಷಾತ್ ನಾರಾಯಣನೇ ವೈದ್ಯನಾಗಬೇಕಾದೀತು ಎಂಬಾರ್ಥವನ್ನು ನೀಡುತ್ತದೆ. 


ಎಲ್ಲ ವ್ಯಾಧಿಗಳನ್ನೂ ವೈದ್ಯರುಗಳಿಂದಲೇ ಗುಣಪಡಿಸಲು ಸಾಧ್ಯವೇ??  ವೈದ್ಯನು ಕೈಕಟ್ಟಿ ಕೂರಬೇಕಾದ ಅದೆಷ್ಟೋ ಪರಿಸ್ಥಿತಿಗಳಲ್ಲಿ ಭಗವಂತ ತನ್ನ ಲೀಲೆಯಿಂದ ಗುಣಪಡಿಸಿರುವ ಅದೆಷ್ಟೋ ಸ್ಪಷ್ಟ ಉದಾಹರಣೆಗಳಿವೆ... 


ಮತ್ತೊಂದು ಆಯಾಮದಿಂದ ನೋಡುವುದಾದರೆ, ದೈವಿ ಗುಣಗಳು ಕೇವಲ ವೈದ್ಯರಲ್ಲ ಅಷ್ಟೇ ಅಲ್ಲದೆ ಹಲವಾರು ವೃತ್ತಿಗಳಲ್ಲೂ ಕಾಣಬಹುದು.. ಪ್ರತಿ ಸಾಮಾನ್ಯ ಮನುಷ್ಯನು ದೈವಿ ಗುಣಗಳಿಂದ ಸಂಪನ್ನನಾಗಬಹುದು ಎಂದು ಭಗವದ್ಗೀತೆ ಹೇಳುತ್ತದೆ.. ಅಷ್ಟೇ ಅಲ್ಲದೆ ಆಸುರಿ ಸಂಪತ್ತುಳ್ಳ (ಕೆಟ್ಟ ಗುಣಗಳುಳ್ಳ) ವ್ಯಾಪಾರಿಕರಣದ ವೈದ್ಯವೃತ್ತಿಯಲ್ಲಿ ತೊಡಗಿಕೊಂಡಿರುವ, ವೈದ್ಯ ವೃತ್ತಿಯ ಪವಿತ್ರತೆಯನ್ನು ಮಲೀನಗೊಳಿಸಿರುವ ಅದೆಷ್ಟೋ ವೈದ್ಯರು  ನಮ್ಮ ನಡುವೆಯೂ ಇಲ್ಲವೇ...

ಎಲ್ಲ ವೈದ್ಯರೂ ದೇವರೆಂದಾದರೆ ದೈವವ್ಯಾಪಾಶ್ರಯ ಚಿಕಿತ್ಸೆಯ ಅರ್ಥವೇನು?? 


ಹಾಗಂದ ಮಾತ್ರಕ್ಕೆ ವೈದ್ಯರು ದೇವರಲ್ಲ ಎಂಬುದು ನನ್ನ ವಾದವಲ್ಲ, ದೈವತ್ವವನ್ನು ಕರ್ತವ್ಯ ನಿಷ್ಠವುಳ್ಳ ಯಾವ ವೃತ್ತಿಪರರು ಆಗಬಹುದು.. ಎಲ್ಲಾ ವೈದ್ಯರುಗಳು ಸಾಕ್ಷಾತ್ ನಾರಾಯಣನಿಗೆ ಸಮ ಎನ್ನುವುದು ತಪ್ಪು ಎಂಬುದು ನನ್ನ ಅಭಿಪ್ರಾಯ... 


ಅನವಶ್ಯ ಆಡಂಬರದ ಹೊರೆ ನಮಗೇಕೆ..? 


ಮತ್ತೊಮ್ಮೆ ಎಲ್ಲರಿಗೂ ವೈದ್ಯ ದಿನಾಚರಣೆಯ ಶುಭಾಶಯಗಳು..🙏


✍️ನಾಬಾಹಿ

- ಡಾ. ಹಿತೇಶ್ ಪ್ರಸಾದ್


Comments

Post a Comment

Popular posts from this blog

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ