ಋತು ರಹಸ್ಯ

ಏನು ಧರಣಿಯ  ಸೊಬಗು ಹೇಗೆ ಅರಿವುದವಳ ರಹಸ್ಯವ..!? 
ಮಂಜು ಮಳೆ ಹಿಮಗಾಳಿ ಚಳಿಗಳ ವಿಸ್ಮಯ ಋತುಚಕ್ರವ
ಎಂತು ಪಡೆವುದು ಪರಮ ಸ್ವಾಸ್ಥ್ಯವ ಬದಲುತಿರಲೀ ಪ್ರಕೃತಿ
ಕಾಲವರಿತು ನಡೆಯೆ ಕಾರ್ಯ ಕಾಡದೆಂದಿಗು ವಿಕೃತಿ 

ಇಳೆಯ ಚಲನೆಗೆ ಎರಡು ಅಯನಗಳಾರು ಋತುಗಳು ವರ್ಷಕೆ.
ಚಳಿ ವಸಂತ ಬೇಸಿಗೆ ಮಳೆ ಶರತ್ ಹಿಮವೆಂಶೀರ್ಷಿಕೆ.
ಮಾಘದಿಂದೆರಡೆರಡು ಮಾಸ ಸೇರಿ ಋತುಗಳ ಲಕ್ಷಣ
ಮೊದಲ ಮೂರು ಉತ್ತರಾಯಣ ಮಿಕ್ಕ ಮೂರೆ ದಕ್ಷಿಣ 

ಸೂರ್ಯ ತಾಪದ ಬಿಸಿಯ ಗಾಳಿಯ ಬಲವಹೀರುವ ಉತ್ತರ
ತಂಪು ಗುಣಗಳ ದಕ್ಷಿಣಯನದಿ ಬಲವು ಹಿಗ್ಗುವುದೆತ್ತರ
ಕಹಿಯೊಗರುಕಟು ಹುಳಿಲವಣಸಿಹಿಯಿಂದ ತುಂಬುವುದೀಜಗೆ
ಋತುವನರಿತಾಹಾರ ಸೇವನೆಯಿಂದ ಹಿತವು ಮನುಜಗೆ 

ದೀರ್ಘ ರಾತ್ರಿಯ ಚಳಿಯಕಾಲ ತಂಪುಗಾಳಿ ಬೀಸುತ
ರೇಷ್ಮೆ ಉಣ್ಣೆ ಬಟ್ಟೆ ಧರಿಸಿ ಬಿಸಿಯ ಸಿಹಿಯ ಸವಿಯುತ
ಬೆಚ್ಚಗಿನ ವ್ಯಾಯಾಮ ಮಾಡಿ ಕುಂಕುಮಾಗರು ಲೇಪಿತ
ಸ್ನಾನ ಪಾನ ಶೌಚಕೆಲ್ಲಕು ಬಿಸಿಯ ನೀರೇ ಬಲು ಹಿತ
ಮೃದುಕಿರಣದಿಂ ಹಸಿರ ಚಿಗುರಿಸಿ ಬಂದ ಸಂತದ ಭಾಸ್ಕರ
ಕಹಿಯೊಗರುವ್ಯಾಯಾಮ ತೊರೆದರೆ ಕಫದ ರೋಗಕೆ ಆಗರ
ಶುಂಠಿ ಜೇನು ಜಲವ ಕುಡಿಯುತ ಸುತ್ತ ಪ್ರಕೃತಿ ಸುಂದರ
ತೆಳುವ ಬಟ್ಟೆ ಧರಿಸಿ ಸವಿಯಿರಿ ರಾತ್ರಿ ಪೌರ್ಣಿಮ ಚಂದಿರ 

ರಣಬಿಸಿಲಿನ ಸುಡುವ ರವಿಯಿಂಬಂತು ಬೇಸಿಗೆಧಾವಿಸಿ
ಖಾರಬಿಸಿವ್ಯಾಯಾಮ ತ್ಯಜಿಸಿ ತಂಪು ದ್ರವಗಳ ಸೇವಿಸಿ
ಅಲ್ಪ ನಿದ್ರೆ ಬಿಸಿಲತಾಪದಿ ಮಲ್ಲೆ ಗಂಧವ ಲೇಪಿಸಿ
ಹತ್ತಿಯುಡುಗೆಯ ಒಡವೆಯಾಗಿಸಿ ರಾತ್ರಿಯಾಗಸ ಪ್ರೇಮಿಸಿ 

ಗುಂಡುಹೊಟ್ಟೆಯ ಮೋಡಬಂದ ಇಳೆಗೆ ಮಜ್ಜನ ಮಳೆಯಲಿ
ಎಲ್ಲೆಡೆಯಲೂ ಹುಳಿಯ ಆರ್ಭಟ ಕೆಟ್ಟ ನೀರು ಹೊಳೆಯಲಿ
ಅಲ್ಪ ಭೋಜನ ಧಾನ್ಯದೊಡನೆ ಹಿತವು ನಿನಗೆ ತಿಳಿಯಲಿ
ಮಳೆಗೆ ದೇಹವನ್ನೊಡ್ಡದಿರುತ ಹೊರಗೆ ಬರೆದಿರಿ ಇರುಳಲಿ 

ಬಂತೊ ನೋಡಿ ಶರದೃತುವು ಪಿತ್ತಮಯವೀ ಲೋಕವು
ಹಸಿದವೇಳೆಯಲಲ್ಪ ಅನ್ನುವ ಭಜಿಸೆ ಬದುಕೇ ನಾಕವು
ಬೇಳೆ ಸಕ್ಕರೆ ಜೇನು ಯೋಗ್ಯ ಹಗಲುನಿದ್ರೆ ವರ್ಜಿತ
ಅಗಸ್ತ್ಯ ತಾರೆಯ ಪ್ರಭವದಿಂದ ನದಿಯ ಜಲವೇ ಅಮೃತ 

ಋತುಗಳ ಕೊನೆ-ಮೊದಲ ವಾರದಿ ಚರ್ಯ ಮಿಶ್ರಿತ ಎತ್ತಲು
ಹೀಗೆ ಅರಿಯಿರಿ ಗುಣವ ನೋಡುತ ಋತುಗಳಿತರೆ ಹೊತ್ತಲು
ಕಾಲಚಕ್ರವು ಕಾಯದೆಂದಿಗೂ ಕಾದು ಕುಳಿತರೆ ಕತ್ತಲು
ಋತುಚರ್ಯದ ಜ್ಞಾನ ಮೊಳಗಿಸಿ ಬೆಳಕಹರಿಸುವ ಸುತ್ತಲೂ

✍️ನಾಬಾಹಿ
ಡಾ. ಹಿತೇಶ್ ಪ್ರಸಾದ್ ಬಿ.


Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ