ಮರಳಿ ಮಣ್ಣಿಗೆ
ಮಣ್ಣೆಂದು ಜರಿಯುವರು,
ಮಣ್ಣಿಗೇ ಮರುಗುವರು
ಹೆಣ್ಣು ಹೊನ್ನಿನ ತೆರದೆ ಮಣ್ಣಿಗೂ ಬೆರಗುವರು
ಮಣ್ಣೆಮ್ಮ ಪೊರೆದವಳೆಂಬುದರಿಯದೆ ಕೊನೆಗೆ
ಮಣ್ಣಲ್ಲಿ ಮಣ್ಣಾಗಿ ಬೆರೆತು ಹೋಗುವರು.
ಮಣ್ಣ ಸತ್ವವದೆಮ್ಮ ಶ್ರಮಕೆ ಫಲ ಒಡ್ಡುವುದು
ಮಣ್ಣ ಸಹನೆಯೇ ನಮ್ಮ ಕುಚೇಷ್ಟೆಗಳ ಸಹಿಸಿಹುದು
ರತಿ ಮಣ್ಣು ಮತಿ ಮಣ್ಣು ಸ್ಥಿತಿ ಮಣ್ಣು ಗತಿ ಮಣ್ಣು
ಏನಿಹುದು ಮಣ್ಣಿರದ ಅಂಶ ಧರಣಿಯಲಿ
ಮಣ್ಣ ಗಂಧವೆ ಮಂದಹಾಸವು ಮಣ್ಣಲೇಪಾಭ್ಯಂಜನ
ಮೃಣ್ಮಯಾಗಿಹ ಕಲೇವರಕೆ ಮಣ್ಣೆ ಅಮೃತಸಿಂಚನ
ಮಣ್ಣ ಕೊಂದು ಕಟ್ಟಬೇಕೇ ಬೆರಗು ಲೋಕವ ಬಾಳಿಗೆ
ಬಂದ ಆಸ್ತಿಯೊ ಗಳಿಸಿದ್ದಲ್ಲ ಉಳಿಸಿ ಮಣ್ಣನ್ನು ನಾಳೆಗೆ
ಬೆರಗು ಬಣ್ಣವ ಮರೆತು, ಮರಳಿ ಮಣ್ಣಲಿ ಬೆರೆತು
ನಿರ್ಲಿಪ್ತ ನಿಶ್ಚಿಂತ ಅನಿಕೇತರಾಗಿ
ಡಂಬ ಭ್ರಾಂತಿಯ ತೊರೆದು ಕ್ಷಿಪ್ರಕ್ರಾಂತಿಯ ಮೆರೆದು
ನಮ್ರದಲಿ ಅನವರತ ಪ್ರಕೃತಿಗೆಬಾಗಿ
✍🏻..ನಾಬಾಹಿ
ಡಾ. ಹಿತೇಶ್ ಪ್ರಸಾದ್ ಬಿ.
Comments
Post a Comment