ಆಯುರ್ವೇದದ ವಿಭಾಗಗಳು
ಆಯುರ್ವೇದ ಪ್ರಕೃತಿಯಷ್ಟೇ ಸಹಜವಾದದ್ದು. ಸೃಷ್ಟಿಯ ಆರಂಭದಲ್ಲೇ ಆಯುರ್ವೇದ ಅಸ್ತಿತ್ವದಲ್ಲಿದ್ದು, ಮಾನವ ತನ್ನ ವಿಕಸನದ ಹಾದಿಯಲ್ಲಿ ಪ್ರಕೃತಿಯೊಂದಿಗೆನ ಒಡನಾಟದಿಂದ ಕ್ರಮೇಣ ಔಷದ ಶಾಸ್ತ್ರವನ್ನು ಹರಿಯುತ್ತಾ ಹೋದ ಎನ್ನಬಹುದು. ಐತಿಹಾಸಿಕವಾಗಿ ಆಯುರ್ವೇದವು ಎರಡು ಸಂಪ್ರದಾಯಗಳಾಗಿ ಸಾಗಿ ಬಂದಿದೆ, ದೇವರಾಜ ಇಂದ್ರನಿಂದ ಮೊದಲಾಗಿ ಭಾರದ್ವಜ ಮಹರ್ಷಿಗಳ ಮೂಲಕ ಅತ್ರೇಯಾದಿ ಮಹರ್ಷಿಗಳಲ್ಲಿ ಪ್ರಚಲಿತವಾಗಿದ್ದ “ಔಷಧ ಶಾಸ್ತ್ರ” ವಿಜ್ಞಾನ ಆತ್ರೇಯ ಸಂಪ್ರದಾಯವೆನಿಸಿಕೊಂಡರೆ, ಸಮುದ್ರ ಮಂಥನದ ಧನ್ವಂತರಿಯಿಂದ ಉದ್ಭವವಾಗಿ ಕಾಶಿರಾಜ ದೆವ್ವದಾಸನ ಮೂಲಕ ಸುಶ್ರುತಾದಿ ಮಹರ್ಷಿಗಳಲ್ಲಿ ಪ್ರಚಲಿತವಾಗಿದ್ದ “ಶಸ್ತ್ರ ಚಿಕಿತ್ಸಾ” ವಿಜ್ಞಾನ ಧನ್ವಂತರಿ ಸಂಪ್ರದಾಯ ಎನಿಸಿಕೊಳ್ಳುತ್ತದೆ. ಆತ್ರೇಯ ಮಹರ್ಷಿಗಳ ಶಿಷ್ಯ ಅಗ್ನಿವೇಶ ರಚಿಸಿದ ಅಗ್ನಿವೇಶ ಸಂಹಿತೆಯು ಚರಕ ಮುನಿಯಿಂದ ಪ್ರತಿ ಸಂಸ್ಕರಣೆಗೊಂಡ ಚರಕ ಸಂಹಿತೆ ಆತ್ರೇಯ ಸಂಪ್ರದಾಯದ ಮೂಲ ಗ್ರಂಥವಾಗಿ ಇಂದಿಗೂ ಪ್ರಸ್ತುತವಾಗಿದೆ, ಅಂತೆಯೇ ದಿವೊದಾಸ ಧನ್ವಂತರಿಯ ಶಿಷ್ಯರಾದ ಶುಶ್ರುತಮುನಿಗಳು ರಚಿಸಿದ “ಸುಶ್ರುತ ಸಂಹಿತೆ” ಧನ್ವಂತರಿ ಸಂಪ್ರದಾಯದ ಮೂಲ ಗ್ರಂಥವಾಗಿದೆ.
ಆಯುರ್ವೇದವು ಎಂಟು ವಿಭಾಗಗಳಾಗಿ ವಿಂಗಡಣೆಗೊಂಡಿದ್ದು ಅವುಗಳನ್ನು “ಅಷ್ಟಾಂಗ ಆಯುರ್ವೇದ” ಎಂದು ಕರೆಯಲಾಗುತ್ತದೆ. ಎಂಟು ಅಂಗಗಳು ಪ್ರಸ್ತುತ ದಿನಗಳಲ್ಲಿ ವಿಷಯವಾರು ಇನ್ನೂ ಹಲವಾರು ಭಾಗಗಳಾಗಿ ವಿಂಗಡಣೆಯಾಗಿದ್ದರು ಮೂಲತಃ ಎಲ್ಲವೂ ಅಷ್ಟಾಂಗಗಳೊಂದಿಗೆ ಬೆಸೆದುಕೊಂಡಿವೆ.
ಆಯುರ್ವೇದದ ಅಷ್ಟಾಂಗಗಳು
01. ಕಾಯ ಚಿಕಿತ್ಸಾ - ಸರ್ವ ದೇಹದ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆ.
02. ಬಾಲ ಚಿಕಿತ್ಸಾ. – ಮಕ್ಕಳ ಆರೋಗ್ಯ ಮತ್ತು ಆರೈಕೆ ವಿಜ್ಞಾನ,
03. ಗ್ರಹ ಚಿಕಿತ್ಸಾ. – ಮಾನಸ ರೋಗ ಮತ್ತು ಭೂತ (ಸೂಕ್ಷ್ಮಾಣು ಜೀವಿಗಳ) ವಿಜ್ಞಾನ.
04. ಊರ್ದ್ವಾಂಗ ಚಿಕಿತ್ಸಾ – ಕಣ್ಣು ಕಿವಿ ಮೂಗು ಮತ್ತು ಗಂಟಲು ರೋಗಗಳ ವಿಜ್ಞಾನ
05. ಶಲ್ಯ ಚಿಕಿತ್ಸಾ - ಶಸ್ತ್ರಚಿಕಿತ್ಸೆ ವಿಜ್ಞಾನ
06. ದಂಷ್ಟ್ರ ಚಿಕಿತ್ಸಾ. – ವಿಷ ವಿಜ್ಞಾನ
07. ಜರ ಚಿಕಿತ್ಸಾ. – ಇಳಿವಯಸ್ಸಿನ ಚಿಕಿತ್ಸಾ ವಿಜ್ಞಾನ
08. ವೃಷ ಚಿಕಿತ್ಸೆ. – ಲೈಂಗಿಕ ಚಿಕಿತ್ಸೆ ವಿಜ್ಞಾನ
ಪ್ರಸ್ತುತ ಆಯುರ್ವೇದವು ವ್ಯವಸ್ಥಿತ ಅಧ್ಯಯನವಾಗಿದ್ದು, ವೈಜ್ಞಾನಿಕ ಚೌಕಟ್ಟಿನಲ್ಲಿ ಇನ್ನು ಹಲವು ವಿಭಾಗಗಳಾಗಿ ವಿಂಗಡಣೆಯಾಗಿದೆ. ಶೈಕ್ಷಣಿಕ ವ್ಯವಸ್ಥೆಗಳು ಮತ್ತು ಚಿಕಿತ್ಸೆಗೆ ಅನುಸಾರವಾಗಿ ದ್ರವ್ಯ ಗುಣ, ರಥಶಾಸ್ತ್ರ ಭೈಷಜ್ಯ ಕಲ್ಪನಾ, ರೋಗ ನಿದಾನ, ಸ್ತ್ರೀರೋಗ ಪ್ರಸೂತಿ ತಂತ್ರ, ಸ್ವಸ್ಥವೃತ್ತ, ಅನುಸಂಧಾನ. ಮುಂತಾದವುಗಳು ಆಯುರ್ವೇದದ ಪ್ರಮುಖ ವಿಭಾಗಗಳು.
ಆಯುರ್ವೇದ ಕೇವಲ ರೋಗಿಗಳಿಗಷ್ಟೇ ಅಲ್ಲದೆ ಆರೋಗ್ಯವಂತರಿಗೂ ಅತ್ಯುಪಯುಕ್ತವಾದದ್ದು, ಸ್ವಸ್ಥವೃತ್ತ ವಿಭಾಗವು ಆರೋಗ್ಯವಂತರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಉತ್ತೇಜನಗೊಳಿಸಿಕೊಳ್ಳಲು ಅನುಸರಿಸಬೇಕಾದ ಹಲವಾರು ಸ್ವಾಸ್ಥ್ಯವರ್ಧನಾ ವಿಧಾನಗಳನ್ನು ಪ್ರತಿಪಾದಿಸುತ್ತದೆ. ಅವುಗಳಲ್ಲಿ ದಿನಚರ್ಯ, ಋತುಚರ್ಯ, ಸದ್ವೃತ್ತ, ಪಥ್ಯ ಮತ್ತು ಆಹಾರ ಸೇವನಾ ವಿಧಾನ, ರಸಾಯನ ಮುಂತಾದವುಗಳು ಪ್ರಮುಖವಾದವು.
. ಈ ಸರಣಿ ಲೇಖನಗಳು ಆರೋಗ್ಯ ರಕ್ಷಣೆ ಹಾಗೂ ಸ್ವಾಸ್ಥ್ಯವರ್ಧನೆಗೆ ಅನುಕೂಲವಾಗುವ ದೈನಂದಿನ ಚಟುವಟಿಕೆಗಳನ್ನು ಸಮಗ್ರವಾಗಿ ತಿಳಿಸಿ, ಉತ್ತಮ ಜೀವನಶೈಲಿಯ ಅನುಸರಣೆಗೆ ಸಹಕಾರಿಯಾಗಲಿದೆ.
Comments
Post a Comment