ಆಯುರ್ವೇದ : ಒಂದು ಕಿರು ಪರಿಚಯ

  

 

               ಆಯುರ್ವೇದವು ಬಹುಶಃ ಮಾನವ ನಾಗರಿಕತೆಯ ಅತ್ಯಂತ ಪುರಾತನ ವೈದ್ಯಶಾಸ್ತ್ರ ಹಾಗೂ ಇಂದಿಗೂ ತನ್ನ ಮೂಲರೂಪದಲ್ಲಿಯೇ ಪ್ರಸ್ತುತವಾಗಿರುವ ಏಕೈಕ ಜೀವನ ಶಾಸ್ತ್ರ. ಆಧುನಿಕತೆಯ ಅಲೆಯಲ್ಲಿ ಅದೆಷ್ಟೋ ಶಾಸ್ತ್ರಗಳು ಕೊಚ್ಚಿಹೋದರೂ ಆಯುರ್ವೇದ ತನ್ನ ಹಿರಿಮೆ ಹಾಗೂ ಗರಿಮೆಗಳಿಂದ ಅಚಲವಾಗಿ ಎಂದಿಗೂ ಸ್ಥಿರವಾಗಿದೆ. ವಿಶ್ವದಾದ್ಯಂತ ಆಯುರ್ವೇದ ಕೇವಲ ವೈದ್ಯಶಾಸ್ತ್ರವಷ್ಟೇ ಅಲ್ಲದೆ ಜೀವನ ವಿಜ್ಞಾನವಾಗಿ ಬಳಕೆಯಾಗುತ್ತಿದೆ. ಆಯುರ್ವೇದ ಒಂದು ಸಂಸ್ಕೃತ ಶಬ್ದ ಇದನ್ನು ಬಿಡಿಸಿದಾಗ “ಆಯಸ್ಸಿನ ಜ್ಞಾನ” ಅಥವಾ “ಜೀವನದ ಜ್ಞಾನ” ಎಂಬ ಕನ್ನಡ ಅರ್ಥ ದೊರೆಯುತ್ತದೆ. ಆದಿ ದಿನಗಳಿಂದಲೂ ಆಯುರ್ವೇದ ವೈಯಕ್ತಿಕ ಆರೋಗ್ಯದ ಜೊತೆ ಜೊತೆಗೆ ಸಮುದಾಯದ ಆರೋಗ್ಯವನ್ನು ಒಂದು ಪ್ರಮುಖ ಕಾಳಜಿಯಾಗಿ ಪರಿಗಣಿಸುತ್ತಾ ಬಂದಿರುವುದು ಇದರ ವಿಶಿಷ್ಟತೆ. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಔಷಧಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಒಟ್ಟು ದೇಶಿಯ ಉತ್ಪಾದನೆ (GDP) ಯಲ್ಲಿ ಹೆಚ್ಚುತ್ತಿರುವ ಆಯುರ್ವೇದದ ಪಾಲುದಾರಿಕೆ ಆಯುರ್ವೇದದ ಮಾನ್ಯತೆಗೆ ಕೈಗನ್ನಡಿಯಾಗಿದೆ.

     ಆಯುರ್ವೇದದ ಉಗಮ ಸೃಷ್ಟಿಯ ಉಗಮದೊಂದಿಗೆ ಆಗಿರಬೇಕು. ಆದರೂ ಪ್ರಸ್ತುತ ಪುರಾವೆಗಳ ಪ್ರಕಾರ ಇತಿಹಾಸಕಾರರು ಆಯುರ್ವೇದವನ್ನು 10,000 ವರ್ಷಗಳ ಹಿಂದಿಗೆ ಹೋಲಿಸುತ್ತಾರೆ. ಶಿಲಾಯುಗದ ಮಾನವ ಆರೋಗ್ಯವಂತ ಆಹಾರ ಅಭ್ಯಾಸಗಳನ್ನು ಪಾಲಿಸುತ್ತಿದ್ದ.‌ ವಿಶ್ವದ ಪ್ರಾಚೀನ ಮಾನವ ಸಭ್ಯತೆ ಮತ್ತು ಮೊದಲ ನಾಗರಿಕತೆಯಿಂದೇ ಪ್ರಸಿದ್ಧಿಯಾಗಿರುವ ಸಿಂಧೂ ಕಣಿವೆ ನಾಗರಿಕತೆಯ ದಿನಗಳಲ್ಲಿ ಆಯುರ್ವೇದದ ಕುರುಹುಗಳು ದೊರೆತಿವೆ. ನಂತರದ ದಿನಗಳಾದ ಮಹಾಜನಪದರ ಕಾಲದಲ್ಲಿ ಆಯುರ್ವೇದ ತಜ್ಞರು ಕಾಣಿಸಿಕೊಳ್ಳುತ್ತಾರೆ, ಕಾಲಕ್ರಮೇಣ ವೇದಗಳ ಯುಗದಲ್ಲಿ ಆಯುರ್ವೇದ ಅಥರ್ವ ವೇದದ ಉಪ ವೇದವಾಗಿ ಕಂಗೊಳಿಸುತ್ತದೆ, ಈ ಕಾಲದಲ್ಲಿ ವೈದಿಕ ಸಾಹಿತ್ಯದ ಜೊತೆಗೆ ಆಯುರ್ವೇದ ಶಾಸ್ತ್ರಗಳೂ ಮೂಡಿಬಂದವು. ಸುಶ್ರುತ ಸಂಹಿತೆ ಮತ್ತು ಚರಕ ಸಂಹಿತೆಗಳು ಇಂದಿಗೂ ಲಭ್ಯವಾಗಿರುವ ಅತ್ಯಂತ ಪ್ರಾಚೀನ ಆಯುರ್ವೇದ ಶಾಸ್ತ್ರಗಳು. ಇದಕ್ಕೂ ಹಿಂದೆಯೇ ಬ್ರಹ್ಮ ಸಂಹಿತೆ, ದಕ್ಷ ಸಂಹಿತೆಗಳು ರಚಿತವಾಗಿದ್ದವು ಎಂದು ಹೇಳಲಾಗುತ್ತದೆ, ಇವೇ ಗ್ರಂಥಗಳ ಸಾರಗಳು ಮೌಕಿಕ ಪರಂಪರೆಯಾಗಿ ತಲೆಮಾರುಗಳಿಂದ ಹರಿದು ಚರಕ ಹಾಗೂ ಸುಶ್ರುತ ಸಂಹಿತೆಗಳಾಗಿ ಮೂಡಿಬಂದಿವೆ. ಈ ಎರಡು ಗ್ರಂಥಗಳ ಸಮಗ್ರ ಸಾರವೇ ವಾಗ್ಭಟರಿಂದ ರಚಿತವಾದ “ಅಷ್ಟಾಂಗ ಹೃದಯ” ಮತ್ತು “ಅಷ್ಟಾಂಗ ಸಂಗ್ರಹ”. ಈ ಮೂಲ ಗ್ರಂಥಗಳನ್ನು ಆಯುರ್ವೇದದ “ಬೃಹತ್ತ್ರಯಿ” ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದಲ್ಲಿ ಉದ್ಭವಿಸಬಹುದಾದ ಎಲ್ಲಾ ಪ್ರಶ್ನೆಗಳಿಗೂ ಬೃಹತ್ತ್ರಯಿಯಲ್ಲಿ ಉತ್ತರವಿದೆ ಹಾಗೂ ಈ ಸಂಹಿತೆಗಳನ್ನು ಆಯುರ್ವೇದದ ಆಕಾರಗ್ರಂಥಗಳಾಗಿ ಉಪಯೋಗಿಸಲಾಗುತ್ತದೆ.
                  ಚರಿತ್ರೆಯ ಪುಟಗಳಲ್ಲಿ ಹಲವಾರು ಆಯುರ್ವೇದ ವೈದ್ಯರುಗಳು ರಾಜ ಮಹಾರಾಜರುಗಳ ಆಸ್ಥಾನ ವೈದ್ಯರಾಗಿ ಕಾಣಿಸುತ್ತಾರೆ, ಬೌದ್ಧ ದೊರೆ ಅಜಾತಶತ್ರುವಿನ ಆಸ್ಥಾನದಲ್ಲಿ ಜೀವಕನೆಂಬ ರಾಜ ವೈದ್ಯನಿದ್ದ ಉಲ್ಲೇಖಗಳು ದೊರೆಯುತ್ತವೆ ಇದೇ ಜೀವಕ ಕಶ್ಯಪ ಸಂಹಿತೆಯನ್ನು ರಚಿಸಿರಬಹುದು ಎಂದು ಅನುಮಾನಿಸಲಾಗುತ್ತದೆ. ಕುಶಾನರ ದೊರೆ ಕನಿಷ್ಕನ ಆಸ್ಥಾನದಲ್ಲಿ ಚರಕಾಚಾರ್ಯರು ರಾಜ ವೈದ್ಯರಾಗಿ ಕಂಗೊಳಿಸಿರುತ್ತಾರೆ, ಮೂಲತಹ ಅಗ್ನಿವೇಶ ಮಹರ್ಷಿಗಳಿಂದ ರಚಿತವಾದ ಸಂಹಿತೆಯ ಕರಡುಗಳನ್ನು ಒಗ್ಗೂಡಿಸಿದ ಕಾರಣದಿಂದಾಗಿ ಆ ಸಂಕಲನಕ್ಕೆ ಚರಕ ಸಂಹಿತೆ ಎಂಬ ಹೆಸರು ಬಂದಿರಬಹುದು. ಸಮುದ್ರ ಮಂಥನ ಸಮಯದಲ್ಲಿ ಉದ್ಭವಿಸಿದ ಸಾಕ್ಷಾತ್ ಧನ್ವಂತರಿಯು ಮುಂದೆ ಗುಪ್ತ ದೊರೆ ವಿಕ್ರಮಾದಿತ್ಯನ ಆಸ್ಥಾನ ಪಂಡಿತರುಗಳಾದ ನವರತ್ನಗಳಲ್ಲಿ ಒಬ್ಬರಾಗಿ ದೆವ್ವದಾಸ ಧನ್ವಂತರಿ ರೂಪದಿಂದ ತನ್ನ ಶಿಷ್ಯ ಸುಶ್ರುತನಿಗೆ ಆಯುರ್ವೇದ ಭೋದಿಸಿದ ಕಾರಣ ಶುಶ್ಕೃತ ಸಂಹಿತೆ ರಚನೆಯಾಗಿದೆ. ಮುಂದೆ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಇರಬಹುದು ಎನ್ನಲಾದ ವಾಗ್ಭಟ ಮಹರ್ಷಿಗಳು ದಕ್ಷಿಣ ದೇಶದವರು ಎನ್ನಲಾಗುತ್ತದೆ. ತದನಂತರ ಬೃಹತ್ರಯೀ (ಚರಕ, ಶುಶ್ರುತ, ವಾಗ್ಭಟ) ಸಂಹಿತೆಗಳ ಪ್ರಭಾವದಿಂದ ಮೂಡಿಬಂದ “ಭಾವ ಪ್ರಕಾಶ” “ಮಾಧವ ನಿಧಾನ” ಮತ್ತು “ಶಾರಂಗಧರ ಸಂಹಿತೆ” ಗಳನ್ನು ಲಘುತ್ತ್ರಯಿಗಳೆಂದು ಪರಿಗಣಿಸಲಾಗುತ್ತದೆ. ಹೀಗೆ ಕಾಲಘಟ್ಟದಲ್ಲಿ ಸಹಸ್ರಾರು ಆಯುರ್ವೇದ ಶಾಸ್ತ್ರ ಗ್ರಂಥಗಳು ರಚಿತವಾಗಿ ಇಂದಿಗೂ ಪ್ರಸ್ತುತವಾಗಿವೆ. ಆಯುರ್ವೇದ ಶಾಸ್ತ್ರವು ರೋಗದ ಕಾರಣ, ಲಕ್ಷಣ ಮತ್ತು ಔಷಧಗಳೆಂಬ ಮೂರು ತತ್ವಗಳ  ಮೇಲೆ ಆಧಾರಿತವಾಗಿದೆ ಹಾಗೂ ಔಷಧ ರೂಪದಲ್ಲಿ ಗಿಡಮೂಲಿಕೆಗಳನ್ನಷ್ಟೇ ಬಳಸದೆ ಖನಿಜಗಳು ಮತ್ತು ವನ್ಯ ಜೀವಿಗಳ ಉತ್ಪನ್ನಗಳನ್ನು ಬಳಸುವುದು ಆಯುರ್ವೇದದ ವಿಶೇಷತೆ. ಆಹಾರವನ್ನೇ ಮೊದಲ ಔಷಧವೆಂದು ಪ್ರತಿಪಾದಿಸುವ ಆಯುರ್ವೇದ ವಿಷಗಳಿಂದಲೂ ಔಷಧವನ್ನು ತಯಾರಿಸುವ ಸೂಕ್ಷ್ಮತೆಗಳನ್ನು ವರ್ಣಿಸುತ್ತದೆ, ಎರಡು ಲಕ್ಷಗಳಿಗೂ ಹೆಚ್ಚು ಔಷಧಗಳನ್ನು ವರ್ಣಿಸುವ ಆಯುರ್ವೇದ ಸ್ವಾಸ್ಥ್ಯ ರಕ್ಷಣೆಯ ಹಲವು ಸೂತ್ರಗಳನ್ನು ಬೋಧಿಸುತ್ತದೆ, ವೈದ್ಯಶಾಸ್ತ್ರವನ್ನು ಅಷ್ಟೇ ಅಲ್ಲದೆ ಕೃಷಿ, ವಾಣಿಜ್ಯ, ಸೂಪ ಶಾಸ್ತ್ರ, ತತ್ವ ಜ್ಞಾನ, ಯೋಗ ಮತ್ತು ಜ್ಯೋತಿಷ್ಯಗಳಂತಹ ಹಲವಾರು ಮಾಹಿತಿಗಳು ಆಯುರ್ವೇದದಲ್ಲಿ ದೊರೆಯುತ್ತವೆ. "ಯದಿಹಸ್ತಿ ತದನ್ಯತ್ರ, ಯನ್ನೇಹಸ್ತಿ ನ ತ್ವತ್ ಕ್ವಚಿತ್" ಎಂಬ ಚರಕ ಸಂಹಿತೆಯ ಸಾಲುಗಳು ಆಯುರ್ವೇದ ಓದುಗರಿಗೆ, ಜಗತ್ತಿನ ಎಲ್ಲಾ ಜ್ಞಾನಗಳು ಆಯುರ್ವೇದದಲ್ಲಿವೆ ಎಂಬ ಸತ್ಯವನ್ನು ಅಕ್ಷರಶಹ ಮನದಟ್ಟು ಮಾಡಿಕೊಡುತ್ತವೆ.
                 ವಿಪರ್ಯಾಸವೆಂದರೆ ಆಧುನಿಕ ದಿನಗಳಲ್ಲಿ ಆಯುರ್ವೇದವನ್ನೇ ಅರಿಯದ ಹಲವು ನಾಟಿ ಪಂಡಿತರು ಆಯುರ್ವೇದದ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ, ಅವರ ಔಷಧಿಗಳಲ್ಲಿ ನಿಜಾಂಶ ಇಲ್ಲವೆಂದು ನಾನು ವಾದಿಸುತ್ತಿಲ್ಲ, ಬಹುತೇಕರು ಆ ಮೂಲಿಕೆಗಳಿಂದ ಗುಣಮುಖರಾಗಿರುವುದನ್ನು ನಾನೇ ಬಲ್ಲೆ, ಆದರೆ ಅವರನ್ನು ನಾಟಿ ವೈದ್ಯರು ಎಂದು ಸಂಭೋದಿಸುವುದು ಸಮಂಜಸವಲ್ಲ, ಹಲಗೂ ವರ್ಷಗಳ ಅನುಭವದ ನಂತರ ಗಾರೆ ಕೆಲಸದಾತನು ಮನೆ ಕಟ್ಟುವುದನ್ನು ಕಲಿಯುತ್ತಾನೆ ಆದರೆ ಅವನನ್ನು ಸಿವಿಲ್ ಇಂಜಿನಿಯರ್ ಎನ್ನಬಹುದೇ. ಆಯುರ್ವೇದ ಅಧ್ಯಯನಕ್ಕೆ ತನ್ನದೇ ಆದ ಚೌಕಟ್ಟು ಮಾನದಂಡಗಳು ಇವೆ, ಅವನು ಅನುಸರಿಸದ ಸ್ವಯಂಘೋಷಿತ ಆಯುರ್ವೇದದ ವೈದ್ಯರುಗಳ ಕುರಿತಾಗಿ ನಾವು ಜಾಗರೂಕರಾಗಬೇಕು ಅಂತೆಯೇ ಹಲವಾರು ಬಹು ರಾಷ್ಟ್ರೀಯ ಕಂಪನಿಗಳು ಆಯುರ್ವೇದದ ಹೆಸರಿನಲ್ಲಿ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗಿಳಿಸಿ ಜನರನ್ನು ವಂಚಿಸುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬರಬೇಕು. ಶತಮಾನಗಳಿಂದಲೂ ವೈಭವಿಸುತ್ತಿರುವ ಆಯುರ್ವೇದ ಸಂಸ್ಕೃತಿಯು ಆಧುನಿಕತೆಯ ಅಲೆಯಲ್ಲಿ ಕೊಚ್ಚಿ ಹೋಗದಂತೆ ತಡೆಯಲು ನಾವೆಲ್ಲರೂ ಕಟಿಬದ್ಧರಾಗೋಣ.







            

    

 

Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ