ಹೊಸವರ್ಷದಿ ಹೊಸತೇನು??
ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು ।
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ॥
ಹಳೆಯವಿವು ನೀನದರೊಳಾವುದನು ಕಳೆದೀಯೊ? ।
ಹಳದು ಹೊಸತರೊಳಿರದೆ? - ಮಂಕುತಿಮ್ಮ ॥
ಡಿ. ವಿ. ಗುಂಡಪ್ಪ
ಜನವರಿ 1 ರಂದು ವಿಶ್ವದಾದ್ಯಂತ ಹೊಸವರ್ಷವನ್ನು ಆಚರಿಸಲಾಗುತ್ತದೆ ಆದರೆ ಈ ದಿನಾಚರಣೆಗೆ 4000 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ ಎಂದರೆ ನಂಬಲಸಾಧ್ಯ. ಹೊಸ ವರ್ಷಾಚರಣೆಯ ಮೊಟ್ಟಮೊದಲ ಪುರಾವೆ ರೋಮನ್ ಇತಿಹಾಸದ ಬ್ಯಾಬಿಲೋನ್ ನಾಗರಿಕತೆಯ ಸುಮೇರಿಯನ್ ಕ್ಯಾಲೆಂಡರ್ನಲ್ಲಿ ಕಂಡುಬರುತ್ತದೆ. ಈ ಕ್ಯಾಲೆಂಡರ್ನಲ್ಲಿ ಕೇವಲ 10 ತಿಂಗಳುಗಳಿದ್ದವು, ಇದರ ಮೊದಲ ತಿಂಗಳು ಮಾರ್ಚ್, ಅವರ ಆಕಾಶ ದೇವತೆಯಾದ ಮಾರ್ಡುಕ್ ಗೆ ಈ ತಿಂಗಳು ಮೀಸಲಾಗಿತ್ತು. ಮುಂದೆ ಕ್ರಮವಾಗಿ ಸಪ್ತ ಅಂದರೆ ಏಳನೇ ತಿಂಗಳಿಗೆ ಸಪ್ಟೆಂಬರ್, ಆಕ್ಟಾ ಎಂದರೆ ಎಂಟನೇ ತಿಂಗಳಿಗೆ ಅಕ್ಟೋಬರ್, ನವ ಎಂದರೆ 9ನೇ ತಿಂಗಳಿಗೆ ನವಂಬರ್ ಮತ್ತು ಡೆಕಾ ಎಂದರೆ 10ನೇ ತಿಂಗಳಿಗೆ ಡಿಸೆಂಬರ್ ಎಂಬ ಹೆಸರುಗಳಿದ್ದವು. ಆಗ ಮಾರ್ಚ್ 1 ಅವರಿಗೆ ಹೊಸ ವರ್ಷವಾಗಿತ್ತ. ಭಾರತೀಯ ಮೂಲದ ಸಂಸ್ಕೃತ ಭಾಷೆಯಲ್ಲಿಯೂ ಸಪ್ತ, ಅಷ್ಟ, ನವ, ದಶಗಳೆಂಬ ಪದಗಳು ಇದೇ ಅರ್ಥವನ್ನು ನೀಡುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಮುಂದೆ ಕ್ರಿ.ಪೂ. 46ರ ಜೂಲಿಯಸ್ ದೊರೆಯ ಜೂಲಿಯನ್ ಕ್ಯಾಲೆಂಡರ್ ಅನ್ವಯ ಡಿಸೆಂಬರ್ 25 ಮತ್ತು ಮಾರ್ಚ್ 25ನ್ನು ಕೂಡ ಹೊಸ ವರ್ಷವನ್ನಾಗಿ ಆಚರಿಸುತ್ತಿದ್ದರು, ಜೂಲಿಯಸ್ ಜನವರಿ ಮತ್ತು ಫೆಬ್ರವರಿ ತಿಂಗಳು ಗಳನ್ನು ಜೂಲಿಯನ್ ಕ್ಯಾಲೆಂಡರ್ ಗೆ ಸೇರ್ಪಡೆಗೊಳಿಸಿದ. ಜಾನಸ್ ಎಂದರೆ ಹೊಸತನದ ಅಥವಾ ಪ್ರಾರಂಭದ ದೇವತೆ ಎಂದರ್ಥ ಹಾಗಾಗಿ ಅಂದಿನಿಂದ ಜನವರಿ 1ನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು, ನಂತರ ಕ್ರಿ. ಶ. 1582 ರಲ್ಲಿ ಪೋಪ್ ಗ್ರಿಗರ್ ತಂದ ಗ್ರಿಗೋರಿಯನ್ ಕ್ಯಾಲೆಂಡರ್ ಇಂದಿನವರೆಗೂ ವಿಶ್ವದಲ್ಲೆಡೆ ಪ್ರಚಲಿತವಾಗಿದೆ. ಜನವರಿ 1 ಆಕಸ್ಮಿಕವಾಗಿ ಆಯ್ಕೆಯಾದ ದಿನ ಇದು ಪ್ರಕೃತಿಯ ಯಾವ ಬದಲಾವಣೆಗಳನ್ನು ಪ್ರತಿಬಿಂಬಿಸುವುದಿಲ್ಲ, ಋತುಚಕ್ರದಲ್ಲಿ ಆಗುವ ಬದಲಾವಣೆಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡದ ಈ ದಿನವನ್ನು ಹೊಸ ವರ್ಷದ ದಿನವನ್ನಾಗಿ ಆಚರಿಸುವುದು ಎಷ್ಟು ಸರಿ ಎಂಬುದು ನಿಮ್ಮ ಆಲೋಚನೆಗೆ ಬಿಟ್ಟಿದ್ದು.
ಈಜಿಪ್ಟಿಯನ್ನರ ಇತಿಹಾಸದಲ್ಲಿ ನೈಲ್ ನದಿಯು ತುಂಬಿ ಉಕ್ಕಿ ಹರಿಯುತ್ತಿದ್ದ ದಿನಗಳನ್ನು ಹೊಸವರ್ಷವನ್ನಾಗಿ ಆಚರಿಸುತ್ತಿದ್ದರು ಸರಿಯಾಗಿ ಅದೇ ದಿನಕ್ಕೆ ಸೀರಿಯಸ್ ನಕ್ಷತ್ರವು ಕೂಡ ಕಾಣಿಸಿಕೊಳ್ಳುತ್ತಿದ್ದರಿಂದ ಈ ದಿನವನ್ನು "ವೆಪೇಟ್ ರೆಂಪೆಟ್" ಎಂದು ಕರೆಯುತ್ತಿದ್ದರು. ಚೀನಿಯರ ಇತಿಹಾಸಗಳ ಪ್ರಕಾರ ಹೊಸ ಬೆಳೆಗಳು ಬಂದ ದಿನವನ್ನುಹೊಸ ವರ್ಷವನ್ನಾಗಿ ಆಚರಿಸುತ್ತಿದ್ದರು, ಚೀನಿಯರ ನಂಬಿಕೆಗಳ ಪ್ರಕಾರ ಆ ದಿನ ನಿಯಾನ್ ಎಂಬ ರಾಕ್ಷಸರು ಅವರ ಹೊಸ ಬೆಳೆಗಳನ್ನು ಕದಿಯಲು ಬರುತ್ತಾರೆಂಬ ಕಾರಣದಿಂದಾಗಿ ಅವರು ಇಡೀ ರಾತ್ರಿ ಮಲಗದೆ ಬೆಂಕಿ ಗಳನ್ನು ಹೊತ್ತಿಸಿ ಭೇರಿ ನಗಾರಿಗಳ ಸದ್ದುಗಳನ್ನು ಮಾಡಲಾಗುತ್ತಿತ್ತು ಅದೇ ಮುಂದುವರೆದು ಇಂದಿನ ದಿನಗಳಲ್ಲಿ ಪಟಾಕಿ ಹೊಡೆಯುವ ಸಂಪ್ರದಾಯ ಮೂಡಿಬಂದಿದೆ. ಪರ್ಷಿಯನ್ನರ ಇತಿಹಾಸದಲ್ಲಿ ಕ್ರಿಸ್ತಪೂರ್ವ 6ನೇ ಶತಮಾನದಲ್ಲಿಯೇ ನವರೋಜ್ ಎಂಬ 13 ದಿನಗಳ ಹೊಸವರ್ಷಾಚರಣೆಯನ್ನು ಆಚರಿಸಲಾಗುತ್ತಿತ್ತು ಮಧ್ಯಮ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಇದು ಇಂದಿಗೂ ಚಾಲನೆಯಲ್ಲಿದೆ.
ಭಾರತದಲ್ಲಿ ಹೊಸ ವರ್ಷಾಚರಣೆಗೆ ತನ್ನದೇ ಆದ ವಿಶೇಷತೆ ಮತ್ತು ಮಹಾತ್ವವಿದೆ. ಭಾರತದ ವಿವಿಧ
ಭಾಗಗಳಲ್ಲಿ ಹೊಸ ವರ್ಷವನ್ನು ವಿವಿಧ ಹೆಸರುಗಳಿಂದ ಆಚರಿಸುತ್ತಾ ಬಂದಿದ್ದರೂ ಯುಗಾದಿ ದಿನವನ್ನು ಎಲ್ಲೆಡೆ ಹೊಸ
ವರ್ಷವನ್ನಾಗಿ ಆಚರಿಸುವ ವಾಡಿಕೆ ಇದೆ.
ಯುಗಾದಿ ಚೈತ್ರ ಮಾಸದ ಮೊದಲ ದಿನ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂಬ ಮೂಲದಿಂದ ಆಗಿದೆ. ಭಾರತದಲ್ಲಿ
ಹೊಸವರ್ಷ ದಿನವನ್ನು ನಿರ್ಧರಿಸುವ ಹಲವು ವಿಧಾನಗಳಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ
ಎಂಬ ಎರಡು ವಿಧಗಳು, ಇವು ಖಗೋಳ ಮತ್ತು ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ
ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ
ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದಲೂ
ರೂಢಿಯಲ್ಲಿದೆ.
ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ. ಇಡೀ ಪ್ರಕೃತಿಯೇ ಹೊಸಚಿಗುರು ಹಸುರಿನಿಂದ ಕೂಡಿರುವ ವಸಂತದ ಹೊಸ ವರ್ಷವೇ ನಿಜವಾದ ಅರ್ಥಗರ್ಭಿತ ಹೊಸ ವರ್ಷ ಆಚರಣೆ ಎಂಬುದು ನನ್ನ ಅಭಿಪ್ರಾಯ. ವಿವಿಧತೆಯಲ್ಲಿ ಏಕತೆ ನಮ್ಮ ವಿಶಿಷ್ಟತೆ. ಹಲವಾರು ಸಂಸ್ಕೃತಿ ಪರಂಪರೆಗಳಿದ್ದರೂ ನಮ್ಮನ್ನು ಒಗ್ಗೂಡಿಸುವ ತತ್ವವೇ "ಭಾರತ". ಸರ್ವ ಧರ್ಮ ಸಮಾನತೆ ನಮ್ಮ ಸಾಮರಸ್ಯತೆಯ ಪ್ರತಿರೂಪ.. ಭಾರತೀಯರು ಪರಮ ಸಹಿಷ್ಣುಗಳು, ಆದರೆ ನಮ್ಮತನವೇ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿನ ಸಹಿಷ್ಣುತೆ ನಮ್ಮ ಅಜಾಗರೂಕತೆಯಾದೀತು. ಬದಲಾವಣೆ ಸೃಷ್ಟಿಯ ನಿಯಮ, ಡಿ. ವಿ. ಗುಂಡಪ್ಪ ನವರು ಹೇಳಿರುವ "ಸತತ ಕೃತಿಯೇ ಪ್ರಕೃತಿ ಮಂಕುತಿಮ್ಮ" ಎಂಬುದು ಪ್ರಕೃತಿಯ ಚಿರನವತೆಯನ್ನು ಪ್ರತಿಪಾದಿಸುತ್ತದೆ. ಪಾಶ್ಚಿಮಾತ್ಯೀಕರಣದೆಡೆಗೆ ಮಾರು ಹೋಗುತ್ತಿರುವ ಯುವ ಜನತೆ ಆತ್ಮಾವಲೋಕಿಸಬೇಕಿದೆ.
✍️ ನಾಬಾಹಿ
ಡಾ. ಹಿತೇಶ್ ಪ್ರಸಾದ್ ಬಿ.
Comments
Post a Comment