ಸ್ವಸ್ಥ ಏವ ಹತೊ ಹಂತಿ, ಸ್ವಸ್ಥೊ ರಕ್ಷತಿ ರಕ್ಷಿತಃ
ಹೌದು ಮೇಲಿನ ಶೀರ್ಷಿಕೆ ಮಹಾಭಾರತದ ಧರ್ಮೋ ರಕ್ಷತಿ ರಕ್ಷಿತಃ ಸೂತ್ರದ ಸಣ್ಣ ಮಾರ್ಪಾಡು, ಆರೋಗ್ಯದ ನಾಶವೇ ಸರ್ವನಾಶ ಮತ್ತು ಆರೋಗ್ಯದ ರಕ್ಷೆಯೇ ಶ್ರೀರಕ್ಷೆ ಎಂಬುದು ಇದರ ಅರ್ಥ. ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಗಳನ್ನು ಪಡೆಯಲು ಆರೋಗ್ಯವೇ ಮೂಲ ಹಾಗಾಗಿ ಧರ್ಮವನ್ನು ಆಚರಿಸಲಾದರೂ ಆರೋಗ್ಯವು ಬೇಕಲ್ಲವೇ. ಆಯುರ್ವೇದ ಶಾಸ್ತ್ರವು ಎಲ್ಲಾ ಒಳಿತುಗಳಿಗೂ ಉತ್ತಮ ಆರೋಗ್ಯವೇ ಮೂಲ ಎಂದು ಸಾರುತ್ತದೆ.
ಆರೋಗ್ಯದ ಕುರಿತಾಗಿ ಜಾಗತಿಕ ಮಟ್ಟದ ಜಾಗೃತಿ ಮೂಡಿಸಲು 1948ರ ಏಪ್ರಿಲ್ 7ರಂದು ಸ್ಥಾಪಿತವಾದ ವಿಶ್ವ ಆರೋಗ್ಯ ಸಂಸ್ಥೆಯ ಸ್ಮರಣಾರ್ಥ ಪ್ರತಿವರ್ಷ ಆ ದಿನವನ್ನು “ವಿಶ್ವ ಆರೋಗ್ಯ ದಿನ”ವನ್ನಾಗಿ ಆಚರಿಸಲಾಗುತ್ತದೆ. "ಉತ್ತಮ ಮತ್ತು ಆರೋಗ್ಯಕರ ಜಗತ್ತನ್ನು ನಿರ್ಮಿಸೋಣ" (Building fairer and healthier world) ಇದು ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ.
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವನ್ನು ಹೀಗೆ ವ್ಯಾಖ್ಯಾನಿಸುತ್ತದೆ, "ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ - ಕೇವಲ ರೋಗ, ಭಾದೆಗಳ ಅಭಾವವಲ್ಲ" ಇದರ ಅನುಸಾರ ಸ್ವಾಸ್ಥ್ಯವೆಂದರೆ ಕೇವಲ ಅನಾರೋಗ್ಯದ ಅಭಾವೆಂದಷ್ಟೇ ಅಲ್ಲ ಆರೋಗ್ಯಕ್ಕೆ ಹಲವು ಆಯಾಮಗಳಿವೆ ಶಾರೀರಿಕ ಸ್ವಾಸ್ಥ್ಯ ಮಾನಸಿಕ ಸ್ವಾಸ್ಥ್ಯ ಮತ್ತು ಸಾಮಾಜಿಕ ಸ್ವಸ್ತ್ಯ ಆರೋಗ್ಯದ ಪ್ರಮುಖ ಆಯಾಮಗಳು, ಸ್ವಾಭಾವಿಕವಾಗಿ ನಮ್ಮ ದೇಹಕ್ಕೆ ಅನುಗುಣವಾದ ಎತ್ತರ, ತೂಕ, ಉಸಿರಾಟ ಕ್ರಿಯೆ, ರಕ್ತದೊತ್ತಡ ಇತ್ಯಾದಿಗಳು ದೈಹಿಕ ಸ್ವಾಸ್ಥ್ಯದ ಚಿನ್ಹೆಗಳು. ದೈನಂದಿನ ಚಟುವಟಿಕೆಗಳಲ್ಲಿ ನ ನಮ್ಮ ಹರ್ಷ, ಉತ್ಸಾಹ, ನೆಮ್ಮದಿ, ಮನ:ಶಾಂತಿ ಇತ್ಯಾದಿಗಳು ಮಾನಸಿಕ ಆರೋಗ್ಯದ ಲಕ್ಷಣಗಳು. ಸಮಾಜಮುಖಿ ಚಿಂತನೆ, ಪರೋಪಕಾರ, ಭ್ರಾತೃತ್ವ ಇತ್ಯಾದಿಗಳು ಸಾಮಾಜಿಕ ಸ್ವಾಸ್ಥ್ಯದ ಕುರುಹುಗಳು.
ಆಧುನಿಕ ದಿನಗಳಲ್ಲಿ ಉತ್ಕೃಷ್ಟವಾದ ಆರೋಗ್ಯ ಪ್ರತಿಯೊಬ್ಬನ ಬಯಕೆ. ಆಯುರ್ವೇದದ ಅನುಸಾರ ಎಲ್ಲಾ ವಿಷಯಗಳಲ್ಲಿನ ಸಮತ್ವ ಅಥವಾ ಸಮತೋಲನತೆಯೇ ಆರೋಗ್ಯ, ಆಯುರ್ವೇದ ಕೇವಲ ಚಿಕಿತ್ಸಾ ಶಾಸ್ತ್ರವಲ್ಲ ಅದೊಂದು ಜೀವನ ಶಾಸ್ತ್ರ ಆಯುರ್ವೇದದಲ್ಲಿ ಹೇಳಿರುವಂತೆ ಅದರ ಮುಖ್ಯ ಉದ್ದೇಶ ಕೇವಲ ರೋಗಿಗಳನ್ನು ಗುಣಪಡಿಸುವುದಷ್ಟೇ ಅಲ್ಲ ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವುದು ಇದರ ಮುಖ್ಯ ಧ್ಯೇಯ, ಸ್ವಸ್ತ್ಯ ಜೀವನಕ್ಕಾಗಿ ಆಯುರ್ವೇದದಲ್ಲಿ ಹಲವಾರು ವಿಧದ ಉಪಾಯಗಳನ್ನು ತಿಳಿಸಲಾಗಿದೆ. ದಿನಚರ್ಯ (ಸ್ವಸ್ಥ ರಕ್ಷಣೆಗಾಗಿ ದಿನಂಪ್ರತಿ ಮಾಡಲೇಬೇಕಾದ ಆಚರಣೆಗಳು), ಋತುಚರ್ಯ (ಕಾಲಚಕ್ರದಲ್ಲಿ ಆಗುವ ಬದಲಾವಣೆಗಳಿಗೆ ಅನುಸಾರವಾಗಿ ಜೀವನಶೈಲಿಯಲ್ಲಿ ಆಗಬೇಕಾದ ಬದಲಾವಣೆಗಳು), ಸದ್ವೃತ್ತ (ಶಿಷ್ಟಾಚಾರ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮಾಡಬೇಕಾದ ಸನ್ನಡತೆಗಳು),
ರಸಾಯನ (ಮುಪ್ಪನ್ನು ತಡೆದು ಚಿರಾಯುವಾಗಲು ಸೇವಿಸಬೇಕಾದ ಆಹಾರ ವಿಹಾರಗಳು), ಮತ್ತು ಪಥ್ಯ (ಪಥ ಎಂದರೆ ಮಾರ್ಗ ಜೀವನ ಮಾರ್ಗದಲ್ಲಿ ಸಹಕಾರಿಯಾಗುವ ವವಿಚಾರಗಳು ಇತ್ಯಾದಿ ಪ್ರಮುಖ ವಿಷಯಗಳು. ಆಯುರ್ವೇದದಲ್ಲಿ ಹೇಳಲಾಗಿರುವ ಆರೋಗ್ಯ ಸಿದ್ಧಾಂತ ಬಹಳ ಸರಳ ಹಾಗೂ ಸುಲಭವಾದದ್ದು ಇದರಂತೆ ಆಹಾರ ಮಿತ್ರ ಮತ್ತು ಬ್ರಹ್ಮಚರ್ಯ ಇವು ತ್ರಯಉಪಸ್ತಂಭಗಳು, ಈ ಮೂರು ಸ್ತಂಭಗಳ ಮೇಲೆ ನಮ್ಮ ಬದುಕು ಮತ್ತು ನಮ್ಮ ಆರೋಗ್ಯದ ಗುಣಮಟ್ಟ ನಿರ್ಧಾರವಾಗುತ್ತದೆ. ಆಹಾರಕ್ಕೆ ಸಂಬಂಧಿಸಿದಂತೆ ಬೇರೆ ಯಾವ ವಿಜ್ಞಾನಗಳಲ್ಲಿ ಕಾಣಸಿಗದ ಹಲವಾರು ವಿಶೇಷತೆಗಳು ಆಯುರ್ವೇದದಲ್ಲಿವೆ,
ಆಹಾರ ವಿಧಿ ವಿಶೇಷ ಆಯತನ (ಸುರಕ್ಷಿತವಾಗಿ ಆಹಾರವನ್ನು ತಯಾರಿಸುವುದು ಹೇಗೆ, ಉತ್ತಮ ಆಹಾರದ ಗುಣಗಳು ಯಾವುವು ಎಂಬುದನ್ನು ತಿಳಿಸುತ್ತದೆ) ಆಹಾರ ವಿಧಿವಿಧಾನ (ಆಹಾರವನ್ನು ಹೇಗೆ ಸೇವಿಸಬೇಕು ಎಂಬುದನ್ನು ಹೇಳುತ್ತದೆ), ಆಶನ ಪ್ರವಿಚಾರಣ (12 ವಿಧದ ಆಹಾರ ಸೇವನೆ) ವಿರುದ್ಧ ಆಹಾರ (ಸೇವಿಸಬಾರದ ಆಹಾರಗಳು) ಆಹಾರ ವರ್ಗಗಳು (ವಿವಿಧ ಆಹಾರೋಪಯೋಗಿ ವಸ್ತುಗಳು ಮತ್ತು ಅವುಗಳ ಗುಣ ಕರ್ಮಗಳು) ನಿತ್ಯ ಸೇವನೆಯ ಆಹಾರ ಮತ್ತು ವರ್ಜ್ಯ ಆಹಾರ ಇತ್ಯಾದಿ. ನಿದ್ರೆಗೆ ಸಂಬಂಧಿಸಿದಂತೆ ನಿದ್ರೆಯ ವಿಧಗಳು ನಿದ್ರೆಗೆ ಸೂಕ್ತ ಸಮಯ ಮತ್ತು ಸೂಕ್ತ ಭಂಗಿ ಹಾಗೂ ನಿದ್ರಿಸಬಾರದು ಸಮಯಗಳ ಕುರಿತು ವಿಶೇಷವಾಗಿ ತಿಳಿಸಲಾಗಿದೆ. ಬ್ರಹ್ಮಚರ್ಯ ಬಹಳಷ್ಟು ಸಂದರ್ಭಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತದೆ ಬ್ರಹ್ಮ ಎಂದರೆ ಜ್ಞಾನ ಚರ್ಯ ಎಂದರೆ ಆಚರಣೆ ಒಟ್ಟಾರೆ ಬ್ರಹ್ಮಚರ್ಯವೆಂದರ ಜ್ಞಾನವನ್ನು ಅರಸಿ ಮಾಡುವ ಎಲ್ಲಾ ಕಾರ್ಯಗಳು ಬ್ರಹ್ಮಚರ್ಯ ಎನಿಸಿಕೊಳ್ಳುತ್ತವೆ. ಈ ಮೂರು ಸ್ಥಂಭಗಳ ಸಮತೋಲನತೆಯೇ ಆರೋಗ್ಯ.
ಆಚಾರ್ಯ ಚರಕರು ಹೇಳಿರುವಂತೆ "ಸರ್ವಂ ಅನ್ಯ ಪರಿತ್ಯಜ್ಯ ಶರೀರಂ ಅನುಪಾಲಯೇತ್, ತತ್ ಅಭಾವ ಹೀ ಭಾವನಾಂ ಸರ್ವಭಾವ ಶಾರೀರಿಣಾಂ." ಇತರ ಎಲ್ಲಾ ಕಾರ್ಯಗಳಿಗೂ ಮುಖ್ಯವಾಗಿ ಆರೋಗ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು ಆರೋಗ್ಯವೇ ಇಲ್ಲವಾದಲ್ಲಿ ಪ್ರಪಂಚದಲ್ಲಿ ಎಲ್ಲವೂ ಇದ್ದು ಇಲ್ಲವಾದಂತೆ. ಸದ್ಯದಲ್ಲಿ ಜಗತ್ತನ್ನು ಕಾಡುತ್ತಿರುವ ಹಲವಾರು ರೋಗಗಳು ತಡೆಗಟ್ಟಬಹುದಾದಂಧವು ಉತ್ತಮ ಆಹಾರ ಮತ್ತು ಜೀವನಶೈಲಿ ಕ್ರಮಗಳನ್ನು ಅನುಸರಿಸಿ ಸ್ವಸ್ಥರಾಗೋಣ.
Comments
Post a Comment