ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.
ಜುಲೈ೦೧ರಂದು ಭಾರತದ ರಾಷ್ಟ್ರೀಯ ವೈದ್ಯ ದಿನಾಚಾರಣೆಯನ್ನು ಆಚರಿಸುತ್ತೆವೆ ಈ ದಿನವು ವೈದ್ಯಶಿರೋಮಣಿ ಭಾರತ ರತ್ನ ಡಾ. ಬಿದಾನ್ ಚಂದ್ರ ರಾಯ್ ಅವರ ಜನ್ಮದಿನಚರಣೆ ಹಾಗು ಭಾವಪೂರ್ವ ಸ್ಮರಣೆಗಾಗಿ ಆಚರಿಸಲಾಗುತ್ತದೆ, ಇವರು ಓರ್ವ ವೈದ್ಯ. ರಾಜಕೀಯನಾಯಕ. ಸ್ವಾತಂತ್ರ್ಯಹೋರಾಟಗಾರ ಅಷ್ಟೆ ಅಲ್ಲದೆ ಓರ್ವ ಮಾನವತಾವಾದಿಯೂ ಹೌದು. ಇವರ ಜನನ ಬಿಹಾರಿನ ಪಾಟ್ನಾದ ಬಳಿ ಇರುವ ಗಂಗಾತೀರದ ಬಂಕಿಪುರ ಗ್ರಾಮದಲ್ಲಿ ಜುಲೈ ೦೧. ೧೮೮೨ರಲ್ಲಿ ಆಯಿತು, ತಂದೆ ಪ್ರಕಾಶ್ ಚಂದ್ರ. ತಾಯಿ ಕಾಮಿನಿದೇವಿ. ಬಾಲ್ಯದಿಂದಲೂ ತಮ್ಮ ಪೋಷಕರ ಶಿಸ್ತು ಮತ್ತು ಸರಳತೆಯಿಂದ ಪ್ರಭಾವಿತರಾದ ಬಿದಾನರು ಪರೋಪಕಾರ ಮತ್ತು ದಾನಗಳಲ್ಲಿ ಹೆಚ್ಚುಆಸಕ್ತಿ ಹೊಂದಿದ್ದರು. ಹದಿನಾಲ್ಕರ ಹರಯದಲ್ಲೆ ತಮ್ಮ ತಾಯಿಯನ್ನು ಅಸುನೀಗಿದ ಬಿದಾನರು ಕಿರಿವಯಸ್ಸಿನಲ್ಲೇ ಬಡತನದ ಶೋಷಣೆಗೆ ತುತ್ತಾದರು.
ಪಾಟ್ನ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿ. ಎ ಪದವಿಯನ್ನು ಮುಗುಸಿದ ಕೂಡಲೇ ಬಿದಾನರಿಗೆ ಬಿಹಾರದ ಲಫ್ಟಿನಂಟ್ ಗವರ್ನರ್ರಿಂದ ಕಲೆಕ್ಟರ್ ಪದವಿಯ ಆಹ್ವಾನ ಬಂದಿತ್ತು ಉನ್ನತ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬಿದಾನರು ಈ ಆಹ್ವಾನವನ್ನು ತಳ್ಳಿಹಾಕಿ. ಬಂಗಾಳದ ಎಂಜಿನೀಯರಿಂಗ್ ಕಾಲೇಜು ಮತ್ತು ಕಲ್ಕತ್ತಾದ ಮಡಿಕಲ್ ಕಾಲೇಜುಗಳಿಗೆ ಅರ್ಜಿ ಸಲ್ಲಿಸುವುದರ ಮೂಲಕ ತಮ್ಮ ಮುಂದಿನ ವ್ಯಾಸಂಗದ ಯೋಜನೆ ಮಾಡಿದರು, ಈ ಪೈಕಿ ಅವರಿಗೆ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುವ ಅವಕಾಶ ದೊರೆಯಿತು ಇದಕ್ಕಗಿ ೧೯೦೧ರಲ್ಲಿ ಕಲ್ಕತ್ತಾಗೆ ಬಂದು ಶಿಕ್ಷಣ ಆರಂಭಿಸಿದರು. ಆಗಿನ ಪ್ರಂಶುಪಾಲರಾದ ಡಾ. ಲ್ಯೂಪಸ್ ರ ಮಾರ್ಗದರ್ಶನದೊಂದಿಗೆ ೧೯೦೬ರಲ್ಲಿ ತಮ್ಮ ವೈದ್ಯಕೀಯ ಪದವಿಯನ್ನು ಪಡೆದರು. ವಿಶ್ವದ ಅತ್ಯಂತ ಪುರಾತನ ವೈದ್ಯಕೀಯ ಕಾಲೇಜುಗಳಲ್ಲೊಂದಾದ ಲಂಡನ್ನಿನ ಸೈಂಟ್ ಬಾತಲೋಮೇವ್ ಆಸ್ಪತ್ರೆಯಲ್ಲಿ ಸ್ನಾತಕೊತ್ತರ ಪದವಿ ಪಡೆಯುವುದು ಬಿದಾನರ ಮಹದಾಸೆಯಾಗಿತ್ತು. ೧೧೨೩ರಲ್ಲಿ ಸ್ಥಾಪನೆಯಾದ ಇದೇ ಆಸ್ಪತ್ರೆಯಲ್ಲಿ ೧೭ನೇ ಶತಮಾನದ ವಿಲಿಯಮ್ ಹಾರ್ವೆಯವರಿಂದ ರಕ್ತ ಪರಚಲನೆಯ ಕುರಿತಾದ ಪ್ರಯೋಗಗಳು ನಡೆದಿದ್ದವು. ಏಷ್ಯಾ ಖಂಡದವರು ಎಂಬ ಕಾರಣದಿಂದಾಗಿ ಬಿದಾನರಿಗೆ ಅಲ್ಲಿ ಪ್ರವೇಶಾತಿ ದೊರೆಯಲಿಲ್ಲ, ೩೦ ಬಾರಿ ಅವರನ್ನು ಪ್ರವೇಶಾತಿಯಿಂದ ನಿರಾಕರಿಸಿದ್ದರೂ, ೧೯೦೯ರ ತಮ್ಮ ೩೧ ನೇ ಪ್ರಯತ್ನದಲ್ಲಿ ಇವರು ಆ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುವಲ್ಲಿ ಸಫಲರಾದರು. ಆಗ ಲಂಡನ್ನಿಗೆ ಹೋಗಲು ಇವರ ಬಳಿ ಇದದ್ದು ೧೨೦೦ರೂ ಮಾತ್ರ ಇವರು ತಮ್ಮ ವಿದ್ಯಾಭ್ಯಾಸದ ಖರ್ಚನ್ನು ಭರಿಸಲು ಆಗಾಗ ನರ್ಸ್ ಆಗಿಯೂ ಕೆಲಸ ಮಾಡಿದ್ದೂ ಉಂಟು. ಇವರ ಮೇಧಾಶಕ್ತಿ ಕಠಿಣ ಪರಿಶ್ರಮ ಮತ್ತು ದೃಡಸಂಕಲ್ಪದಿಂದ ೧೯೧೧ರಲ್ಲಿ ಇವರು ರಾಯಲ್ ಸೊಸೈಟಿ ಆಫ್ ಫಿಸಿಶಿಯನ್ ಮತ್ತು ರಾಯಲ್ ಸೊಸೈಟಿ ಆಫ್ ಸರ್ಜನ್ ಎರಡರ ಸದಸ್ಯರಾದರು, ಇವರ ಪ್ರತಿಭೆಯನ್ನು ಶ್ಲಾಘಿಸಿ ಡೀನ್ ಡಾ. ಶೊ, ಇವರಿಗೆ ೩೦ ಬಾರಿ ಪ್ರವೇಶಾತಿ ನಿರಾಕರಿಸಿದಕ್ಕೆ ಸಂತಾಪ ವ್ಯಕ್ತ ಪಡಿಸಿದರು. ಮತ್ತು ಮುಂಬರುವ ದಿನಗಳಲ್ಲಿ ನಿಮ್ಮಿಂದ ಪರಿಚಯ ಪತ್ರವನ್ನು ಪಡೆದು ಬರುವ ಯಾವುದೇ ಭಾರತೀಯನಿಗೆ ಇಲ್ಲಿಯಾವುದೆ ನಿಭಂದನೆಗಳಿಲ್ಲದೆ ಪ್ರವೇಶಾತಿ ನೀಡಲಾಗುವುದು ಎಂದು ವಾಗ್ವಾದ ನೀಡೀದರು.
ಈ ಎಲ್ಲಾ ಸಾಧನೆಗಳ ನಂತರ ಡಾ.ರಾಯ್ ೧೯೧೨ ಜುಲೈ ನಲ್ಲಿ ಭಾರತಕ್ಕೆ ಮರಳಿ ದೇಶ ಸೇವೆಗೆ ಮುಂದಾದರು. ಇವರ ಕರುಣೆ. ವಾತ್ಸಲ್ಯ ಭರಿತವಾದಂತಹ ಚಿಕಿತ್ಸಾ ಸೇವೆ ಅಧ್ವಿತೀಯವಾದುದ್ದು, ರಾಷ್ಟ್ರಪಿತ ಮಾಹಾತ್ಮಗಾಂಧಿಯವರ ಮುಖ್ಯ ವೈದ್ಯರೂ ಇವರೇ, ೧೯೪೩ ರ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಗಾಂಧಿಯವರ ೨೧ ದಿನಗಳ ಸತತ ಉಪವಾಸ ಸಂಧರ್ಭದಲ್ಲಿ ಅವರ ಶುಷ್ರೂಷೆಯನ್ನು ಮಾಡಿದವರು ಬಿದಾನರೇ. ೧೯೪೮ರಲ್ಲಿ ಗಾಂಧಿಯವರ ಮಾರ್ಗದರ್ಶನದ ಮೇರೆಗೆ ಬೆಂಗಾಲ್ ಕಾಂಗ್ರೇಸ್ ಪಕ್ಷದ ವತಿಯಿಂದ ಶಾಸಕಾಂಗ ಚುನಾವಣೆಯಲ್ಲಿ ನಾಯಕರಾಗಿ ಸ್ಪರ್ಧಿಸಿ ವಿಜಯಶಾಲಿಯಾಗಿ, ೧೯೪೮ ಜನವರಿ ೨೩ರಂದು ಮಹಾತ್ಮ ಗಾಂಧಿಯವರ ಸಮ್ಮುಖದಲ್ಲಿ ಅಂದಿನ ರಾಜ್ಯಪಾಲರಾದ ಸೀ,ರಾಜಗೋಪಾಲಚಾರಿಯವರಿಂದ ಬಂಗಾಳದ ೨ನೇ ಮುಖ್ಯಮಂತ್ರಿಯಾಗಿ ಪ್ರತಿಜ್ನೆ ಪಡೆದರು. ಇಲ್ಲಿಂದ ಸತತ ೧೪ ವರ್ಷದ ವರೆಗೆ ಇವರು ಪ್ರಾಮಣಿಕ ಮತ್ತು ಅಪ್ರತಿಮ ಶಾಸನವನ್ನು ಮುಂದುವರೆಸಿ ನವಭಾರತ ನಿರ್ಮಾಣದಲ್ಲಿ ಶ್ರಮಿಸಿದರು. ಇವರು ತಮ್ನ ಆಡಳಿತ ದಿನಗಳಲ್ಲಿಯೂ ರೋಗಿಗಳ ಸೇವೆಯನ್ನುಬಿಡಲಿಲ್ಲಇವರ ವೃತ್ತಿಪರತೆ ಮತ್ತು ಪ್ರಸಿದ್ಧಿಗೆ ಮೆಚ್ಚಿ ರಷ್ಯಾದ ಪ್ರಧಾನಿ ಇವರಿಗೆ ನೀಡ ಬಯಸಿದ್ದ ಖಾಸಗೀ ವಿಮಾನವೊಂದನ್ನು ತಿರಸ್ಕರಿಸಿ ಅದೇ ಹಣದಲ್ಲಿ ಕಲ್ಕತ್ತ ವೈದ್ಯಕೀಯ ಕಾಲೇಜಿಗೆ ಆಧುನಿಕ ಸಲಕರಣೆಗಳನ್ನು ನೀಡಲೆಂದು ಮನವಿ ಮಾಡಿದರು. ಭಾರತದ ಬಡತನ ಮತ್ತು ದಾರಿದ್ರ್ಯವನ್ನು ತೊಲಗಿಸಲು ಶಿಕ್ಷಣಾವೇ ಮೂಲ ಅಸ್ತ್ರವೆಂದು ನಂಬಿದ್ದ ಬಿದಾನರು ಐ.ಐ.ಟಿ ಖರಗ್ಪುರ್. ರವೀಂದ್ರ ಭಾರತ ವಿಶ್ವವಿದ್ಯಾನಿಲಯ. ಹಿಮಾಲಯ ಆರೋಹಣ ವಿದ್ಯಾಲಯ. ಚಿತ್ತರಂಜನ್ ಸೇವಾ ಸದನ. ಕಮಲ್ ನೆಹರು ಆಸ್ಪತ್ರೆ. ಮತ್ತು ಜಾಧವ್ ಟಿ ಬಿ ಆಸ್ಪತ್ರೆಗಳ ಸ್ಥಾಪನೆಯಲ್ಲಿ ಮೂಲ ಪಾತ್ರ ವಹಿಸಿದ್ದರು. ಆಧುನಿಕ ಭಾರತದ ನಾಗರೀಕರಣದಲ್ಲೂ ಇವರ ಪಾತ್ರ ಮಹತ್ವದ್ದಾಗಿದೆ. ಇಂದಿನ ಬಂಗಾಳದ ಮಹಾನಗರಗಳಾದ ದುರ್ಗಾಪುರ. ಕಲ್ಯಾಣೀ. ಮತ್ತು ಬಿದಾನನಗರಗಳ ಶಿಲಾನ್ಯಾಸಕರೂ ಇವರೇ. ೧೯೨೯ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯ (IMA) ಅಧ್ಯಕ್ಷರಾಗಿ, ೧೯೩೧ರಲ್ಲಿ ಕೊಲ್ಕತ್ತಾದ ಮೇಯರ್ ಆಗಿ, ೧೯೪೧ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ೧೯೪೪ ಭಾರತೀಯ ವೈದ್ಯಕೀಯ ಅನುಅಸಂಧಾನ (MCI) ಅಧ್ಯಕ್ಷರಾಗಿ ಮತ್ತು ೧೯೫೭ರ ಭಾರತೀಯ ವಿಜ್ನಾನ ಕಾಂಗ್ರೇಸ್ಸಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಅಸಾಧಾರಣ ದೇಶ ಭಕ್ತಿ ಮತ್ತು ದೇಶಸೇವೆಯನ್ನು ಪರಿಗಣಿಸಿ ೧೯೬೧ರಲ್ಲಿ ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸದ್ ಅವರು ಬಿದಾನರಿಗೆ ದೇಶದ ಅತ್ಯುನ್ನತ ನಾಗರೀಕ ಪುರಸ್ಕಾರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು, ಇವರ ೧೯೬೧ರ ಅಮೇರಿಕ ಪ್ರವಾಸದವೇಳೆಯಲ್ಲಿ ಇವರ ಸಾಮರ್ಥ್ಯವನ್ನರಿತಿದ್ದ ಅಮೇರಿಕದ ಅಧ್ಯಕ್ಷರಾದ ಜಾನ್.ಎಫ್. ಕೆನಡಿ ಇವರನ್ನು ವ್ಹೈಟ್ ಹೌಸ್ ಗೆ ಕರೆಸಿಕೊಂಡು ತಮ್ಮ ಕೀಲು ನೋವಿನ ಕುರಿತಾಗಿ ಚಿಕಿತ್ಸಾ ಸಲಹೆಗಳನ್ನು ಪಡೆದು ಇವರ ಚಿಕಿತ್ಸೆಯಲ್ಲೇ ಗುಣಮುಖರಾದರು, ಹೀಗೆ ಸದಾ ಜನಸಾಮಾನ್ಯರ ಸೇವೆಯಲ್ಲೆ ತೊಡಗಿಸಿಕೊಂಡ ಬಿದಾನರು ಜುಲೈ೧ ೧೯೬೨ ರಂದು ಯಥಾವತ್ ರೋಗಿಗಳ ಸೇವೆಯನ್ನು ಮಾಡೀ ತಮ್ಮ ಮನೆಯನ್ನು ಅವರ ತಾಯಿಯ ಸ್ಮಾರಕ ಆಸ್ಪತ್ರೆಯನ್ನಾಗಿ ಪರಿವರ್ತಿಸುವಂತೆ ಕೋರಿ ೮೦ರ ಹರಯದಲ್ಲಿ ದೈವಾಧೀನರಾದರು, ಇವರ ಗೌರವಾರ್ಥ ಭಾರತ ಸರ್ಕಾರ ಪ್ರತೀ ವರ್ಷ ದೇಶದ ಅಪ್ರತಿಮ ವೈಧ್ಯರಿಗೆ ಬಿ.ಸಿ.ರಾಯ್ ಪ್ರಶಸ್ತಿ ನೀಡುತ್ತದೆ ಮತ್ತು ೧೯೯೧ರಿಂದ ಇವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ವೈದ್ಯ ದಿನಾಚಾರಣೆಯನ್ನಾಗಿ ಆಚರಿಸಲಾಗುತ್ತದೆ, ಬಿದಾನರು ಇಂದಿಗೂ ವಿಶ್ವವೈದ್ಯ ಶಿರೋಮಣಿಗಳ ಪಟ್ಟಿಯಲ್ಲಿ ಅಗ್ರರಾಗಿರುವ ಮೂಲಕ ಅಮರರಾಗಿದ್ದಾರೆ,
Very Informative Bro👍
ReplyDelete👏👏👏
ReplyDelete