ಸಿರಿಗನ್ನಡ ವೈಭವ
ಕನ್ನಡಸಿರಿ ವೈಭವವಿದು ಸಭ್ಯತೆಗಳ ಬಟ್ಟಲು ಜ್ಞಾನ ಗೀತೆ ನೀತಿ ನಾಟ್ಯ ಶಿಲ್ಪಕಲೆಯ ತೊಟ್ಟಿಲು ||೧|| ನದಿಮಲೆಗಳ ಹಸಿರೆಲೆಗಳ ತಂಗಾಳಿಯ ಜೋಗುಳ ಕಡಲಲೆಗಳ ಕರುನಾಡಿದು ಪ್ರಕೃತಿಗಿದೇ ದೇಗುಲ ||೨|| ಜಕಣ ಚವನ ಚಾವುಂಡರು ಉಳಿಯ ಹಿಡಿದು ತನ್ಮಯ ಜೀವತುಂಬಿ ಮೂಡಿಬಂದ ವಾಸ್ತು ಶಿಲ್ಪ ವಿಸ್ಮಯ ||೩|| ಜಿನಬಸದಿ ಬುದ್ಧಚೈತ್ಯ ಸರ್ವಧರ್ಮ ಸಾರಿವೆ ಗುರುದ್ವಾರ ಮಂದಿರಶಿಲೆ ಇತಿಹಾಸವ ಹಾಡಿವೆ ||೪|| ಕನಕ ವಾದಿ ವಿಜಯ ವ್ಯಾಸ ಪುರಂದರರ ಕೀರ್ತನೆ ಬೇಂದ್ರೆ ಮಾಸ್ತಿ ಕೃಷ್ಣರಾಯ ಪುಟ್ಟಪ್ಪರ ಪ್ರಾರ್ಥನೆ ||೫|| ಗಂಗದಂಬ ಚೋಳಕೂಟ ಹೊಯ್ಸಳ ಚಾಲುಕ್ಯರು ಶಾಸನದಲೆ ಕಾವ್ಯ ಬೆಸೆದ ಒಡೆಯ ನಾಯ್ಕ ಬುಕ್ಕರು ||೬|| ಹಿರಿಮೆ ಮರೆತು ಸಿಲುಕದಿರಿ ದುರಭಿಮಾನ ಸುಳಿಯಲಿ ಕೆಚ್ಚೆದೆಯಲಿ ಬಡಿದೆಬ್ಬಿಸಿ ನವ ಪೀಳಿಗೆ ಉಳಿಯಲಿ ||೭|| ಚಿರಮೌಡ್ಯದ ನಿದ್ರೆ ಸಾಕು ಇಂದಾದರೂ ಏಳಿರಿ ಘನವೈಭವ ಪರಂಪರೆ ನಾಡ ಸಿರಿಯ ಹಾಡಿರಿ ||೮||