Posts

Showing posts from January, 2024

ರಾಮನಷ್ಟು..

Image
ಕಾರ್ಪಣ್ಯಗಳಿಗಂಜಿ ಬದುಕುತಿರುವೆ ಬಂದಿಹುದನೆದುರಿಸದೆ ಬೆದಕುತಿರುವೆ ತಿರುಗಿ ನೋಡು ನಿನ್ನ ಕಷ್ಟವೆಷ್ಟು? ಸಹಿಸಬಲ್ಲೆಯ ನೀನು ರಾಮನಷ್ಟು ಮಾತನುಳಿಸಲು ಮುಕುಟ ಪಟ್ಟಬಿಟ್ಟು ನೆಡೆದನಡವಿಗೆ ನಾರುಮುಡಿಯ ತೊಟ್ಟು ಗಮನಿಸೊಮ್ಮೆ ನಿನ್ನ ನಷ್ಟವೆಷ್ಟು? ಸಹಿಸಬಲ್ಲೆಯ ನೀನು ರಾಮನಷ್ಟು  ಕ್ರೂರರಕ್ಕಸಸಮರ ಲೋಕಹಿತಕೆ ಸತಿಸುತರನೇ ತೊರೆದ ಪ್ರಜಾಹಿತಕೆ ಮರಳಿ ನೋಡು ನಿನ್ನ ಚಿಂತೆಯೆಷ್ಟು ಸಹಿಸಬಲ್ಲೆಯ ನೀನು ರಾಮನಷ್ಟು  ಸಂಘರ್ಷವೆದುರಿಸುತ ಧೈರ್ಯದಿಂದ  ಅಲೆಗು ಸೇತುವೆಯಿತ್ತ ಸ್ಥೈರ್ಯದಿಂದ ಅವಲೋಕಿಸು ನಿನ್ನ ದೃಢತೆಯೆಷ್ಟು ಸಹಿಸಬಲ್ಲೆಯ ನೀನು ರಾಮನಷ್ಟು ಅಪವಾದ ನಿಂದನೆಗೆ ತತ್ತರಿಸದೆ  ಕ್ಷಮೆಯಿತ್ತ ಮತ್ಸರವ ಬಿತ್ತರಿಸದೆ ಯೋಚಿಸೊಮ್ಮೆ ನಿನ್ನ ಸಹನೆಯೆಷ್ಟು ಸಹಿಸಬಲ್ಲೆಯ ನೀನು ರಾಮನಷ್ಟು  ನಗುನಗುತ ನುಂಗಿಬಿಡು ಕಹಿಯನಿಷ್ಟು ಭವಣೆ ನಿನಗಿರದೆಂದು ಸಹಿಸದಷ್ಟು  ಭರವಸೆಯರಿವಿನ ದೀಪ ಉರಿಸಿದಷ್ಟು ಬದುಕು ಹೊಳೆವುದು ನಿನದು ರಾಮನಷ್ಟು  ಅವತಾರ ನೆಪ ಭಜಿಸು ಮೌಲ್ಯಗಳನು  ಶತಮಾನಕು ನಶಿಸದಿಹ  ತತ್ವಗಳನು ಸನ್ನಡತೆ ವ್ರತವಾಗಿಸು ಮನುಜೋತ್ತಮ ಕಲಿಯುಗಕೆ ರಘುವಾಗು ಪುರುಷೋತ್ತಮ                                          ✍️ನಾಬಾಹಿ